ನೆರೆ ರಾಜ್ಯದಿಂದ ಮದ್ಯ ತರುವುದೇ ಕಷ್ಟ, ಬೃಹತ್ ಪ್ರಮಾಣದ ಆರ್‌ಡಿಎಕ್ಸ್ ಹೇಗೆ ಬಂತು ?

Update: 2019-02-20 17:32 GMT

ಧಾರವಾಡ, ಫೆ. 20: ನೆರೆ ರಾಜ್ಯದಿಂದ ಎರಡು ಬಾಟಲಿ ಮದ್ಯ ತರುವುದೇ ಕಷ್ಟ. ಹೀಗಿರುವಾಗ 350 ಕೆ.ಜಿ.ಗಳಷ್ಟು ಬೃಹತ್ ಪ್ರಮಾಣದ ಆರ್‌ಡಿಎಕ್ಸ್ ಜಮ್ಮು-ಕಾಶ್ಮೀರದ ಪುಲ್ವಾಮಾಕ್ಕೆ ಎಲ್ಲಿಂದ ಬಂತು? ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಪ್ರಶ್ನಿಸಿದ್ದಾರೆ.

ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉಗ್ರರ ದಾಳಿ ನಡೆದಿದ್ದರೆ ಬಿಜೆಪಿಯವರು ಧರಣಿ ಕೂರುತ್ತಿದ್ದರು. ಆದರೆ, ಈಗ ಮಾತ್ರ ಸುಮ್ಮನಿದ್ದಾರೆ. ಇವರು ಎಂತಹ ದೇಶಪ್ರೇಮಿಗಳು ಎಂಬುದು ಸ್ಪಷ್ಟ ಎಂದು ಟೀಕಿಸಿದರು.

ಈ ದೇಶದಲ್ಲಿನ ಇತ್ತೀಚಿನ ವಿದ್ಯಮಾನಗಳನ್ನು ನೋಡಿದ ಜನತೆ ಕಾಂಗ್ರೆಸ್ ಪರ ನಿಂತಿದ್ದು, ‘ಚೌಕಿದಾರ’ನ ವಾಸ್ತವ ಪರಿಸ್ಥಿತಿ ಜನರಿಗೆ ಅರ್ಥವಾಗಿದೆ. ಪುಲ್ವಾಮಾದಲ್ಲಿನ ದಾಳಿ ಕೇಂದ್ರ ಗುಪ್ತಚರ ಇಲಾಖೆ ವೈಫಲ್ಯವನ್ನು ಎತ್ತಿತೋರಿಸುತ್ತದೆ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.

ನೆರೆಯ ಗೋವಾದಿಂದ ಚೆಕ್‌ಪೋಸ್ಟ್ ದಾಟಿ ಎರಡು ಮದ್ಯದ ಬಾಟಲಿ ತರಲಿಕ್ಕೆ ಆಗುವುದಿಲ್ಲ. ಅಷ್ಟೊಂದು ಭದ್ರತೆ ಇರುತ್ತದೆ. ಆದರೆ, ಪುಲ್ವಾಮಾದಲ್ಲಿ ಬೃಹತ್ ಪ್ರಮಾಣದ ಆರ್‌ಡಿಎಕ್ಸ್ ಎಲ್ಲಿಂದ ಮತ್ತು ಹೇಗೆ ಬರಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ದೇಶದ ಪರಿಸ್ಥಿತಿ ಎಲ್ಲಿಗೆ ಬಂತು ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವಣೆ ಸಂದರ್ಭದಲ್ಲಿ ಯಾವುದೇ ವಿಚಾರಗಳಿದ್ದರೂ ಬಿಜೆಪಿಯವರು ಗಲಾಟೆ ಮಾಡುತ್ತಾರೆ. ಅವರಿಗೆ ಅಭಿವೃದ್ಧಿಯ ಅಜೆಂಡವೇ ಇಲ್ಲ. ಮೋದಿ ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜಾತಿ-ಧರ್ಮಗಳ ನಡವೆ ಜಗಳ ಹಚ್ಚುವ ಕೆಲಸದಲ್ಲಿ ತೊಡಗಿದೆ ಎಂದು ವಿನಯ್ ಕುಲಕರ್ಣಿ ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News