ಮಹಿಳೆಯರ ಪುನಃಶ್ಚೇತನಕ್ಕೆ ಪ್ರತ್ಯೇಕ ಕೋಶ ರಚನೆ: ಸಚಿವೆ ಡಾ.ಜಯಮಾಲಾ

Update: 2019-02-20 15:36 GMT

ಬೆಂಗಳೂರು, ಫೆ.20: ಶೋಷಿತ ಮಹಿಳೆಯರ ಪುನಃಶ್ಚೇತನಕ್ಕೆ ಅಗತ್ಯವಾಗಿರುವ ಪ್ರತ್ಯೇಕ ಕೋಶವೊಂದನ್ನು ರಚಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಡಾ.ಜಯಮಾಲಾ ಇಂದಿಲ್ಲಿ ಹೇಳಿದರು.

ಬುಧವಾರ ನಗರದ ಕಬ್ಬನ್ ಪಾರ್ಕ್‌ನ ಬಾಲಭವನ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರ ನೇತೃತ್ವದ ಹಿಂದಿನ ರಾಜ್ಯ ಸರಕಾರದ ಆಡಳಿತ ಅವಧಿಯಲ್ಲಿ ದಮನಿತ ಮಹಿಳೆಯರ ಏಳಿಗೆಗಾಗಿ ಸಮಿತಿಯೊಂದನ್ನು ರಚಿಸಲಾಗಿತ್ತು. ಅದು ರಾಜ್ಯದೆಲ್ಲೆಡೆ ಅಧ್ಯಯನ ನಡೆಸಿ, ಸಮಗ್ರ ವರದಿ ನೀಡಿದ ಅನುಸಾರ ಪ್ರತ್ಯೇಕ ಕೋಶವೊಂದನ್ನು ರಚಿಸಲಾಗಿದೆ. ಇದರಿಂದ ಮಹಿಳೆಯರ ಶ್ರೇಯೋಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದರು.

ಮಹಿಳೆಯರಿಗೆ ತುರ್ತು ಅಗತ್ಯ ನೆರವು ಸೇರಿದಂತೆ ಎಲ್ಲಾ ಬಗೆಯ ಮಾಹಿತಿ ನೀಡುವ ಸಹಾಯವಾಗಿಯೂ ದಿನ 24 ಗಂಟೆಯೂ ಚಾಲ್ತಿಯಲ್ಲಿದ್ದು, ಈ ಯೋಜನೆ ಪೊಲೀಸ್, ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಯೋಗದಲ್ಲಿ ಅನುಷ್ಠಾನವಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ 47 ನಿರ್ಗತಿಕ ಮಹಿಳಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಕೇಂದ್ರಗಳ ಸಂಪೂರ್ಣ ಮಾಹಿತಿಯನ್ನು ಆನ್‌ಲೈನ್ ಮೂಲಕ ಪಡೆದುಕೊಳ್ಳಬಹುದು. ಮಾತೃ ಶ್ರೀ ಯೋಜನೆಯಡಿಯಲ್ಲಿ ಗರ್ಭಿಣಿಯರಿಗೆ ಮೊದಲ ಎರಡು ಜೀವಂತ ಹೆರಿಗೆಯ ಪೂರ್ವದ ಕೊನೆಯ ಮೂರು ತಿಂಗಳು ಮಾಸಿಕ 1 ಸಾವಿರದಂತೆ, ಬಾಣಂತಿಯರ ಹೆರಿಗೆ ನಂತರ ಮೂರು ತಿಂಗಳ ಕಾಲ 1 ಸಾವಿರ, ಒಟ್ಟು 6 ಸಾವಿರ ರೂ.ಗಳನ್ನು ಆಧಾರ ಲಿಂಕ್ ಮಾಡಿರುವ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸಮಾಜ ಕಲ್ಯಾಣ ಸಲಹಾ ಮಂಡಳಿ ಅಧ್ಯಕ್ಷೆ ವೆಂಕಟಲಕ್ಷ್ಮೀ, ನಿರ್ದೇಶಕಿ ಆರುಂಧತಿ ಚಂದ್ರಶೇಖರ, ಅಂತೋನಿ ಸೆಬಾಸ್ಟಿನ್, ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News