×
Ad

ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಇನ್ನು ಸರಳ: ಕಂದಾಯ ಸಚಿವ ಸಚಿವ ದೇಶಪಾಂಡೆ

Update: 2019-02-20 21:09 IST

ಬೆಂಗಳೂರು, ಫೆ. 20: ಕೃಷಿಯೇತರ ಉದ್ದೇಶಗಳಿಗೆ ಕೃಷಿ ಭೂಮಿ ಪರಿವರ್ತನೆ ಪ್ರಕ್ರಿಯೆಯಲ್ಲಿನ ವಿಳಂಬ ತಪ್ಪಿಸಲು ಅಫಿಡೆವಿಟ್ ಆಧರಿತ ಆನ್‌ಲೈನ್ ಭೂ ಪರಿವರ್ತನೆಗೆ ಚಾಲನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ

ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆನ್‌ಲೈನ್ ಸೇವೆಗೆ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಪರಿವರ್ತನೆ ಪ್ರಕ್ರಿಯೆಯಲ್ಲಿನ ವಿಳಂಬ ತಪ್ಪಿಸಿ, ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇಲಾಖೆ ಮೊದಲ ಬಾರಿಗೆ ಆನ್‌ಲೈನ್ ಭೂ ಪರಿವರ್ತನಾ ಪದ್ಧತಿ ಜಾರಿಗೆ ತಂದಿದೆ ಎಂದರು.

ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆಗೆ ಭೂ ಮಾಲಕರು ಪದೇ ಪದೇ ಕಂದಾಯ ಇಲಾಖೆಗೆ ಅಲೆಯಬೇಕಿತ್ತು. ಅಲ್ಲದೆ, ಆರು ತಿಂಗಳಗೂ ಹೆಚ್ಚು ಕಾಲ ವಿಳಂಬವಾಗುತ್ತಿತ್ತು. ಆದರೆ, ನೂತನ ಆನ್‌ಲೈನ್ ಪದ್ಧತಿಯಡಿ ಕೇವಲ ಎರಡೇ ತಿಂಗಳಲ್ಲಿ ಭೂ ಪರಿವರ್ತನೆ ಮಾಡಿಕೊಳ್ಳಬಹುದಾಗಿದೆ ಎಂದರು.

ಭೂ ಪರಿವರ್ತನೆಗೆ 15 ರಿಂದ 20 ದಾಖಲೆಗಳನ್ನು ಒದಗಿಸಬೇಕಾಗಿತ್ತು. ಇದೀಗ ಅರ್ಜಿದಾರರು ಅಫಿಡೆವಿಟ್ ಜತೆಗೆ ಇತ್ತೀಚಿನ ಪಹಣಿ, ಮ್ಯುಟೇಷನ್ ಪ್ರತಿ ಮತ್ತು ಒಂದು ಸರ್ವೆ ನಂಬರ್‌ನಲ್ಲಿ ಭಾಗಶಃ ಭೂ ಪರಿವರ್ತನೆಗೆ ವಿನಂತಿಸಿದ ಸಂದರ್ಭದಲ್ಲಿ ಮಾತ್ರ ಐಐ-ಇ ನಕ್ಷೆ ಒದಗಿಸಬೇಕು ಎಂದು ಅವರು ಮಾಹಿತಿ ನೀಡಿದರು.

ಆನ್‌ಲೈನ್ ಪ್ರಕ್ರಿಯೆಗೆ ಸೂಕ್ತ ತಂತ್ರಾಂಶವನ್ನು ಸಿದ್ಧಪಡಿಸಲಾಗಿದ್ದು, ಅರ್ಜಿದಾರರು ಇಲಾಖೆಯ ಜಾಲತಾಣ landrecords.karnataka.gov.inಗೆ ಭೇಟಿ ನೀಡಿ ಯೂಸರ್ ಐಡಿ ಮೂಲಕ ಮೊದಲಿಗೆ ಅಫಿಡವಿಟ್ ಜನರೇಷನ್ ಲಿಂಕ್ ಮೂಲಕ ಅಗತ್ಯ ಮಾಹಿತಿ ತುಂಬಿ ಸಿಸ್ಟಂ ಜನರೇಟೆಡ್ ಅಫಿಡವಿಟ್ ಪಡೆದು, ಅದನ್ನು 200ರೂ. ಛಾಪಾಕಾಗದದಲ್ಲಿ ಮುದ್ರಿಸಿ ನೋಟರಿಯವರಿಂದ ದೃಢೀಕರಿಸಿ ಅದನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ಅರ್ಜಿ ಸಲ್ಲಿಸಿದ ಒಂದು ವಾರದೊಳಗಾಗಿ ಅಫಿಡವಿಟ್‌ನ ಮೂಲ ಪ್ರತಿಯನ್ನು ಸಂಬಂಧಪಟ್ಟ ತಹಶೀಲ್ದಾರ್ ಕಚೇರಿ ಅಥವಾ ಜಿಲ್ಲಾಧಿಕಾರಿಗಳ ಕಚೇರಿಯ ಅರ್ಜಿ ಸ್ವೀಕೃತಿ ಕೇಂದ್ರಕ್ಕೆ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಸಂಬಂಧಪಟ್ಟ ತಹಶೀಲ್ದಾರರು ತಮ್ಮ ಕಚೇರಿಯಲ್ಲಿ ಸ್ವೀಕೃತಗೊಂಡ ಅಫಿಡವಿಟ್ ಮೂಲಪ್ರತಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ 48 ಗಂಟೆಯೊಳಗಾಗಿ ಸಲ್ಲಿಸಿ ಸ್ವೀಕೃತಿಯನ್ನು ಪಡೆಯಬೇಕು ಎಂದರು.

ಅರ್ಜಿಯನ್ನು ಸ್ವೀಕರಿಸಿದ ನಂತರ ಜಿಲ್ಲಾಧಿಕಾರಿಗಳು 60 ದಿನದೊಳಗಾಗಿ ಭೂ ಪರಿವರ್ತನಾ ಆದೇಶ ಅಥವಾ ಹಿಂಬರಹವನ್ನು ಕಡ್ಡಾಯವಾಗಿ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಈ ಭೂ ಪರಿವರ್ತನಾ ಆದೇಶ ಅಥವಾ ಹಿಂಬರಹವನ್ನು ಅರ್ಜಿದಾರರು ಇಲಾಖೆಯ ಜಾಲತಾಣದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಅವಧಿ ವಿಸ್ತರಣೆ: ಸರಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿ ವಾಸ ಮಾಡುತ್ತಿರುವವರು 94 ‘ಸಿ’ ಮತ್ತು 94 ‘ಸಿಸಿ’ ಅಡಿಯಲ್ಲಿ ಅರ್ಜಿ ಸಲ್ಲಿಸಲು ಇದ್ದ ಗಡುವನ್ನು 2019ರ ಮಾರ್ಚ್ 31ರ ವರೆಗೆ ವಿಸ್ತರಿಸಲಾಗಿದೆ. ಇದೇ ವೇಳೆ ಬಗರ್ ಹುಕುಂ ಸಾಗುವಳಿಯಡಿ 50 ಮತ್ತು 53 ಅರ್ಜಿ ಸಲ್ಲಿಸಲು 2020ರ ಎಪ್ರಿಲ್ 26ರ ವರೆಗೆ ಅವಧಿ ವಿಸ್ತರಿಸಲಾಗಿದೆ.

ಬಗರ್ ಹುಕುಂ ಅಡಿ 50 ಮತ್ತು 53 ಅರ್ಜಿ ಸಲ್ಲಿಸಲು ವಿಫಲರಾದ ಅರ್ಹ ಪಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಲು ನಮೂನೆ 57ರಲ್ಲಿ ಅವಕಾಶ ಹಾಗೂ ನಮೂನೆ 57 ಮತ್ತು 58ರಡಿ ಅರ್ಜಿ ಸಲ್ಲಿಸಲು 2019ರ ಮಾರ್ಚ್ 16ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News