ಮೈಸೂರು ಜಿಪಂ ನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಖಚಿತ: ಸಂಸದ ಆರ್.ಧ್ರುವನಾರಾಯಣ

Update: 2019-02-20 17:44 GMT

ಮೈಸೂರು,ಫೆ.20: ಮೈಸೂರು ಜಿ.ಪಂ ಚುನಾವಣೆಗೆ ಇನ್ನೆರಡೇ ದಿನಗಳಿದ್ದು, ಹೀಗಾಗಿ ಚುನಾವಣೆಗೆ ಸಿದ್ಧತೆ ಬಗ್ಗೆ ಕಾಂಗ್ರೆಸ್ ಜಿ.ಪಂ.ಸದಸ್ಯರ ಜೊತೆ ನಡೆಸಿದ್ದೇವೆ ಎಂದು ಸಂಸದ ದ್ರುವನಾರಾಯಣ್ ತಿಳಿಸಿದರು.

ನಗರದ ಜಲದರ್ಶಿನಿಯಲ್ಲಿ ಜಿ.ಪಂ.ಸದಸ್ಯರುಗಳ ಜೊತೆ ಗುರುವಾರ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಜಿ.ಪಂ ಚುನಾವಣೆಯಲ್ಲೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ರಾಜ್ಯದಲ್ಲಿರುವಂತೆ ಮೈಸೂರಿನ ಜಿಪಂ ನಲ್ಲಿ ಮೈತ್ರಿ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ನಮ್ಮ ಪಕ್ಷದ ವರಿಷ್ಠರು ಹಾಗೂ ಜೆಡಿಎಸ್ ವರಿಷ್ಠರು ಮಾತುಕತೆ ನಡೆಸಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು.

ಜಿ.ಪಂ ನಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮುಂದುವರೆಯುತ್ತದೆ ಎಂಬ ಸಚಿವ ಸಾರಾ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಈ ಹಿಂದೆ ಸಾರಾ ಮಹೇಶ್ ಅವರು ಪಾಲಿಕೆ ಚುನಾವಣೆಯಲ್ಲೂ ಈ ರೀತಿ ಹೇಳಿದ್ದರು. ಕೊನೆಗೆ ನಮ್ಮ ಜೊತೆಗೆ ಮೈತ್ರಿ ಮಾಡಿಕೊಂಡರು. ಈಗಾಗಲೇ ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ. ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಖಚಿತ. ಜೊತೆಗೆ ಎಲ್ಲಾ ಜಿಪಂ ಸದಸ್ಯರಿಗೂ ವಿಪ್ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಂಸದರ ಜೊತೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್, ಜಿ.ಪಂ.ಸದಸ್ಯೆ ಲತಾ ಸಿದ್ದಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News