ಚಿಕ್ಕಮಗಳೂರು ನಗರಸಭೆ ಸಾಮಾನ್ಯ ಸಭೆ: ಹುತಾತ್ಮ ಯೋಧ ಗುರು ಕುಟುಂಬಕ್ಕೆ 3 ಲಕ್ಷ ರೂ. ನೀಡಲು ನಿರ್ಣಯ

Update: 2019-02-20 18:21 GMT

ಚಿಕ್ಕಮಗಳೂರು,ಫೆ.20: ಉಗ್ರರ ದಾಳಿಯಲ್ಲಿ ಇತ್ತೀಚೆಗೆ ವೀರಮರಣ ಹೊಂದಿದ ಮಂಡ್ಯ ಜಿಲ್ಲೆಯ ವೀರಯೋಧ ಎಚ್.ಗುರು ಕುಂಟುಂಬಕ್ಕೆ ನಗರಸಭೆ ಮತ್ತು ನಗರಸಭೆ ಸದಸ್ಯರಿಂದ ಮೂರು ಲಕ್ಷ ರೂ. ನೀಡಲಾಗುವುದೆಂದು ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್ ಅಧ್ಯಕ್ಷತೆಯಲ್ಲಿ ಬುಧವಾರ ನಗರಸಭೆ ಸಂಭಾಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರಸಭೆ ಸದಸ್ಯ ಟಿ.ರಾಜಶೇಖರ್ ಮಾತನಾಡಿ, ವೀರಯೋಧ ಎಚ್.ಗುರು ಅವರ ಕುಟುಂಬಕ್ಕೆ ನಗರಸಭೆ ಹಾಗೂ ಸದಸ್ಯರ ಒಂದು ತಿಂಗಳ ಗೌರವಧನ ನೀಡಲು ನಿರ್ಧಾರ ಮಾಡಬೇಕು. ನಗರಸಭೆ ಎಲ್ಲಾ ಸದಸ್ಯರು ಎಚ್.ಗುರು ಅವರ ಕುಟುಂಬಕ್ಕೆ ಭೇಟಿ ನೀಡಿ 2 ಲಕ್ಷ ರೂ. ಚೆಕ್ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಎರಡು ಲಕ್ಷದ ಜೊತೆಗೆ ನಗರಸಭೆ ಮಾಜಿ ಅಧ್ಯಕ್ಷರು ಇನ್ನಷ್ಟು ಹಣ ಸೇರಿಸಿ ಗುರು ಅವರ ಕುಟುಂಬಕ್ಕೆ ಮೂರು ಲಕ್ಷ ರೂ. ನೀಡುವಂತೆ ತಿಳಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಒಮ್ಮತ ಸಮ್ಮತಿಸಿದರು.

ನಂತರ ಮಾತನಾಡಿದ ಸದಸ್ಯ ಎಚ್.ಡಿ.ತಮಯ್ಯ, ಇತ್ತೀಚೆಗೆ ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಡಾ. ಶಿವಕುಮಾರ್ ಸ್ವಾಮೀಜಿ ಅವರ ನೆನಪಿನಾರ್ಥವಾಗಿ ನಗರದ ಯಾವುದಾದರೂ ರಸ್ತೆಗೆ ಅವರ ಹೆಸರು ಇಡುವಂತೆ ಸಭೆಗೆ ತಿಳಿಸಿದಾಗ, ಮುಂದಿನ ದಿನಗಳಲ್ಲಿ ನಗರದ ಯಾವುದಾದರೊಂದು ರಸ್ತೆಗೆ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿಡುವುದಾಗಿ ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್ ತಿಳಿಸಿದರು.

ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ನಗರದ ಎಂ.ಜಿ ರಸ್ತೆ ಹಾಗೂ ಐ.ಜಿ ರಸ್ತೆ ವಾಹನ ನಿಲುಗಡೆಗೆ ಪಾರ್ಕಿಂಗ್ ಶುಲ್ಕ ವಸೂಲಿ ಟೆಂಡರ್ ಗೆ ತಮ್ಮ ಪಕ್ಷದ ವಿರೋಧವಿದೆ. ಇದನ್ನು ಕಡತದಲ್ಲಿ ನಮೂದಿಸುವಂತೆ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಸದಸ್ಯರ ನಡುವೆ ಚರ್ಚೆ ನಡೆದ ನಂತರ ಕಾಂಗ್ರೆಸ್ ಪಕ್ಷದ ವಿರೋಧವನ್ನು ಕಡತದಲ್ಲಿ ನಮೂದಿಸಲು ಸಮ್ಮತಿ ಸೂಚಿಸಿದರು. 

ಯುಜಿಡಿ ಕಾಮಗಾರಿ ಪ್ರಗತಿಯ ಬಗ್ಗೆ ಸದಸ್ಯ ರೂಬೀನ್ ಮೊಸೆಸ್ ಸಭೆಯಲ್ಲಿ ಪ್ರಸ್ತಾಪಿಸಿದಾಗ, ಯುಜಿಡಿ ಕಾಮಗಾರಿ ಸಾಕಷ್ಟು ಪ್ರಗತಿಯಲ್ಲಿದೆ. ಮಾರ್ಚ್ ಅಂತ್ಯಕ್ಕೆ ಮನೆ ಮನೆ ಸಂಪರ್ಕ ನೀಡುವುದಾಗಿ ಅಧಿಕಾರಿ ತಿಳಿಸಿದರು. ನಗರಸಭೆ ಆಯುಕ್ತೆ ತುಷಾರಮಣಿ ಮಾತನಾಡಿ, ಯುಜಿಡಿ ಪೈಪ್‍ಲೈನ್ ಕೊಳಚೆ ಸಮರ್ಪಕವಾಗಿ ಸಾಗುತ್ತದೆಯೇ ಎಂಬುದನ್ನು ಪ್ರಾಯೋಗಿಕವಾಗಿ ಪರೀಕ್ಷಿಸಬೇಕು. ತಕ್ಷಣವೇ ಪ್ರಾಯೋಗಿಕ ಪರೀಕ್ಷೆ ನಡೆಸುವಂತೆ ಅಧಿಕಾರಿಗೆ ತಿಳಿಸಿದರು. ಸದಸ್ಯ ರೂಬಿನ್ ಮೊಸೆಸ್ ಮಾತನಾಡಿ ಕಾಮಗಾರಿ ಶೀಘ್ರದಲ್ಲಿಯೇ ಮುಗಿಸುವಂತೆ ತಿಳಿಸಿದರು.

ಸದಸ್ಯ ಎಚ್.ಡಿ.ತಮ್ಮಯ್ಯ ಮಾತನಾಡಿ, ನಗರದ ಕೆಲ ಭಾಗದಲ್ಲಿ ಬೀದಿದೀಪದ ಸಮಸ್ಯೆ ಇದೆ. ಬೀದಿದೀಪದ ಸಮಸ್ಯೆಯಿಂದ ಮನೆಗಳ್ಳತನ, ಸರಗಳ್ಳತನ ಪ್ರಕರಣ ನಡೆಯುತ್ತಿದೆ. ಹಾಳಾಗಿರುವ ಬೀದಿದೀಪ ಸರಿಪಡಿಸಿ ಹೈಮಾಸ್ಕ್ ದೀಪ ಅಳವಡಿಸುವಂತೆ ಒತ್ತಾಯಿಸಿದರು. ಹಾಗೂ ನಗರದ ಕೆಲ ಭಾಗದಲ್ಲಿ ಬೀದಿಬಾಯಿಗಳ ಕಾಟ ಹೆಚ್ಚಾಗಿದೆ. ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. 

ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಡಾ.ಶಿವಕುಮಾರ್ ಸ್ವಾಮೀಜಿ, ಅಂಬರೀಶ್, ಅನಂತ್ ಕುಮಾರ್ ಸೇರಿದಂತೆ ಗಣ್ಯರಿಗೆ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು. ಸಭೆಯಲ್ಲಿ ನಗರಸಭೆ ಉಪಧ್ಯಕ್ಷ ಸುಧೀರ್, ಸದಸ್ಯರಾದ ಲೀಲಾ, ಕವಿತಾ, ರೂಬೆನ್ ಮೋಸೆಸ್ ಅಫ್ಸರ್ ಅಹ್ಮದ್, ದೇವರಾಜ್ ಶೆಟ್ಟಿ, ಮುತ್ತಯ್ಯ, ಸುರೇಖಾ ಸಂಪತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅಮೃತ್ ಯೋಜನೆಯಡಿಯಲ್ಲಿ ಪೈಪ್‍ಗಳನ್ನು ಅಳವಡಿಸಲಾಗುತ್ತಿದೆ. ಪೈಪ್‍ಲೈನ್ ಅಳವಡಿಕೆ ಸಂದರ್ಭದಲ್ಲಿ ರಸ್ತೆಗಳು ಹಾಳಾಗಿ, ಸಾರ್ವಜನಿಕರು ತಿರುಗಾಡದ ಸ್ಥಿತಿ ನಿರ್ಮಾಣವಾಗಿದೆ. ಪೈಪ್‍ಲೈನ್ ಅಳವಡಿಕೆ ನಂತರ ಸರಿಯಾಗಿ ಮುಚ್ಚುತ್ತಿಲ್ಲ. ಇದರಿಂದ ದೂಳು ಏಳುತ್ತಿದೆ ಎಂದು ಆರೋಪಿಸಿದಾಗ, ಸಂಬಂಧಪಟ್ಟ ಇಲಾಖೆ ಅಧಿಕಾರಿ ಮಾತನಾಡಿ, ಪೈಪ್‍ಲೈನ್ ಅಳವಡಿಕೆಗೆ ಕಟಿಂಗ್ ಯಂತ್ರ ಉಪಯೋಗಿಸಲಾಗುತ್ತಿದೆ. ಪೈಪ್ ಅಳವಡಿಕೆಗೆ ಆಯಾ ಪ್ರಮಾಣದ ಅನುಗುಣವಾಗಿ ಕಟಿಂಗ್ ಯಂತ್ರದಿಂದ ಕತ್ತರಿಸಿ ತೆಗೆಯಲಾಗುತ್ತಿದೆ .

-ಹಿರೇಮಗಳೂರು ಪುಟ್ಟಸ್ವಾಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News