ಮುಂಬೈಗೆ ರೈತರಿಂದ ಬೃಹತ್ ರ್ಯಾಲಿ

Update: 2019-02-20 18:42 GMT

ಹೊಸದಿಲ್ಲಿ, ಫೆ. 20: ಆಲ್ ಇಂಡಿಯಾ ಕಿಸಾನ್ ಸಭಾದ ಎರಡನೇ ಮುಂಬೈಗೆ ರ್ಯಾಲಿಯಲ್ಲಿ ಪಾಲ್ಗೊಳ್ಳಲು 10 ಸಾವಿರ ರೈತರು ಬುಧವಾರ ನಾಸಿಕ್ ತಲುಪಿದ್ದಾರೆ. ನಾಸಿಕ್‌ನಿಂದ ಮುಂಬೈಗೆ ರ್ಯಾಲಿ ನಡೆಸಲಿದ್ದಾರೆ.

ಪೊಲೀಸರು ಪರವಾನಿಗೆ ನೀಡಲು ನಿರಾಕರಿಸಿದ ಹೊರತಾಗಿಯೂ ಪ್ರತಿಭಟನಕಾರರು ರ್ಯಾಲಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ, ನೀರಾವರಿ ಸೌಕರ್ಯ ಹಾಗೂ ಇತರ ಬೇಡಿಕೆಗಳನ್ನು ಆಗ್ರಹಿಸಿ ರೈತರು ಈ ಪ್ರತಿಭಟನೆ ನಡೆಸಿದ್ದಾರೆ.

 ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಎಐಕೆಎಸ್ ರಾಜ್ಯ ಕಾರ್ಯದರ್ಶಿ ಡಾ. ಅಜಿತ್ ನವಾಲೆ, ಮಹಾರಾಷ್ಟ್ರ ಸರಕಾರ ರೈತರಿಗೆ ದ್ರೋಹ ಎಸಗಿದೆ ಎಂದು ಆರೋಪಿಸಿದರು. ಮೊದಲ ರ್ಯಾಲಿಯ ಬಳಿಕ ದೇವೇಂದ್ರ ಫಡ್ನಾವಿಸ್ ಅವರ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. ಆದರೆ, ವಂಚಿಸಿತು. ಸರಕಾರದಿಂದ ರೈತರಿಗಾದ ದ್ರೋಹವನ್ನು ವಿರೋಧಿಸಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.

ನಾಸಿಕ್‌ನಲ್ಲಿ ಸಂಜೆ ಸೇರಿದ ಪ್ರತಿಭಟನಕಾರರಿಗೆ ನಾಸಿಕ್‌ನ ಮಾಜಿ ಸಂಸದ ಹಾಗೂ ಎನ್‌ಸಿಪಿಯ ನಾಯಕ ಸಮೀರ್ ಭುಜ್‌ಬಲ್ ಬೆಂಬಲ ಘೋಷಿಸಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಾಸಿಕ್‌ನಲ್ಲಿ ಸೇರಿದ ಹೆಚ್ಚಿನವರು ಪೈಂಟ್, ತ್ರಯಂಬಕೇಶ್ವರ, ಪಾಲ್ಘಾರ್ ಹಾಗೂ ಸಮೀಪದ ಪ್ರದೇಶಗಳ ಬುಡಕಟ್ಟು ಸಮುದಾಯದ ಜನರು, ಭೂರಹಿತ ಕಾರ್ಮಿಕರು ಹಾಗೂ ಸಣ್ಣ ರೈತರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News