ರಫೇಲ್ ತೀರ್ಪು: ಮರು ಪರಿಶೀಲನೆಗೆ ಸುಪ್ರಿಂ ಸಮ್ಮತಿ

Update: 2019-02-21 15:34 GMT

ಹೊಸದಿಲ್ಲಿ,ಫೆ.21: ರಫೇಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಸೆಂಬರ್ 14ರಂದು ತಾನು ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಮೇಲ್ಮನವಿಯನ್ನು ಆಲಿಸಲು ಸರ್ವೋಚ್ಚ ನ್ಯಾಯಾಲಯ ಗುರುವಾರ ಸಮ್ಮತಿ ಸೂಚಿಸಿದೆ.

ಶ್ರೇಷ್ಠ ನ್ಯಾಯಾಲಯ ಈ ಹಿಂದೆ ನೀಡಿದ್ದ ಆದೇಶದಲ್ಲಿ ಫ್ರಾನ್ಸ್ ಜೊತೆಗಿನ 58,000 ಕೋಟಿ ರೂ. ಮೊತ್ತದ ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ತನಿಖೆಗೆ ಆದೇಶಿಸಲು ನಿರಾಕರಿಸಿತ್ತು ಮತ್ತು ಕೇಂದ್ರ ಸರಕಾರಕ್ಕೆ ಕ್ಲೀನ್ ಚಿಟ್ ನೀಡಿತ್ತು. ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಈ ಮನವಿಯಲ್ಲಿ ರಫೇಲ್ ಪ್ರಕರಣದಲ್ಲಿ ನ್ಯಾಯಾಲಯದ ದಿಕ್ಕು ತಪ್ಪಿಸಲು ಪ್ರಯತ್ನಿಸಿದ ಕೆಲವು ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದರು.

ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ನೀಡಿದ್ದ ಪತ್ರದಲ್ಲೂ ಸರಕಾರ ಒಪ್ಪಂದದ ಅಂತಿಮ ಮೊತ್ತದ ಬಗ್ಗೆ ಸುಳ್ಳು ಹೇಳಿದೆ. ಜೊತೆಗೆ ನ್ಯಾಯಾಲಯದ ಬಳಿಯಿದ್ದ ದಾಖಲೆಗಳಲ್ಲಿ ಕೆಲವೊಂದು ಸಾಲುಗಳು ಸರಿಯಿಲ್ಲ ಎಂದು ಹೇಳುತ್ತಾ ಅದನ್ನು ತಿದ್ದಲು ಮುಂದಾಗಿರುವುದು ನ್ಯಾಯಾಂಗ ಪ್ರಕ್ರಿಯೆಯನ್ನೇ ಕಲುಷಿತಗೊಳಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಒಪ್ಪಂದದಲ್ಲಿ ರಕ್ಷಣಾ ಸಚಿವಾಲಯ ಮತ್ತು ಭಾರತೀಯ ಮಾತುಕತೆ ತಂಡವನ್ನೂ ನಿರ್ಲಕ್ಷಿಸಿರುವ ಪ್ರಧಾನ ಮಂತ್ರಿಗಳ ಕಚೇರಿ ಅನಧಿಕೃತ ಸಮಾನಾಂತರ ಮಾತುಕತೆ ನಡೆಸಿರುವ ಬಗ್ಗೆ ಮಾಧ್ಯಮಗಳ ವರದಿಯನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ರಫೇಲ್ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅವುಗಳಲ್ಲಿ ಒಂದು ದೋಷ ಹೊಂದಿರುವ ಕಾರಣ ಇನ್ನೂ ರಿಜಿಸ್ಟ್ರಿ ಬಳಿಯಿದೆ ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ಪೀಠ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News