ಸರಕಾರಿ ಎಲ್‌ಕೆಜಿ-ಯುಕೆಜಿ ಆರಂಭ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-02-21 13:12 GMT

ಬೆಂಗಳೂರು, ಫೆ.21: ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭ ಮಾಡಲಾಗುವುದು. ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಆರಂಭಿಸಿ, ಮಕ್ಕಳನ್ನು ಯಾವ ಮಾಧ್ಯಮಕ್ಕೆ ಸೇರಿಸಬೇಕು ಎನ್ನುವ ಆಯ್ಕೆ ಪೋಷಕರಿಗೆ ಬಿಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಗುರುವಾರ ನಗರದ ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಆಯೋಜಿಸಿದ್ದ ‘ಭಾರತೀಯ ಶಿಕ್ಷಣದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಆದರೆ ಸರಕಾರಿ ಶಿಕ್ಷಣ ಸಂಸ್ಥೆಯಲ್ಲಿ ಓದಿದ ಬಡ ಮಕ್ಕಳು ಉದ್ಯೋಗ ಪಡೆಯುವ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಅಲ್ಲದೆ, ರಾಷ್ಟ್ರ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವ್ಯಾವಹಾರಿಕ ಭಾಷೆಯಾಗಿಯೂ ಇಂಗ್ಲಿಷ್ ಇದೆ. ಅದರ ಜತೆಗೆ, ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಮತ್ತಿತರೆ ಉನ್ನತ ವ್ಯಾಸಂಗವೂ ಇಂಗ್ಲಿಷ್‌ನಲ್ಲಿರುತ್ತದೆ. ಹೀಗಾಗಿ, ಪ್ರಾಥಮಿಕ ಶಿಕ್ಷಣದಿಂದ ಇಂಗ್ಲಿಷ್ ಕಲಿಸಲು ಸರಕಾರ ಈ ನಿರ್ಣಯ ಕೈಗೊಂಡಿದೆ ಎಂದು ಅವರು ಸರಕಾರದ ತೀರ್ಮಾನವನ್ನು ಸಮರ್ಥಿಸಿಕೊಂಡರು.

ಖಾಸಗಿ ಶಾಲಾ-ಕಾಲೇಜುಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಅದಕ್ಕೆ ಸರಿಸಮಾನವಾಗಿ ಸರಕಾರದ ಶಾಲಾ-ಕಾಲೇಜುಗಳಲ್ಲೂ ಶಿಕ್ಷಣ ಸಿಗಬೇಕು ಇದಕ್ಕೆ ಸರಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಶಿಕ್ಷಣ ಪಡೆಯುವುದು ಬಡಕುಟುಂಬದ ಮಕ್ಕಳಿಗೆ ಹೊರೆ ಎನ್ನುವಂತಾಗಿದೆ. ಸರಕಾರಿ ಶಿಕ್ಷಣ ಸಂಸ್ಥೆಗಳು ಖಾಸಗಿಯವರಿಗೆ ಪೈಪೋಟಿ ನೀಡಲು ಆಗುತ್ತಿಲ್ಲ. ಅವರಷ್ಟೇ ಉತ್ತಮ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಯುನಿವರ್ಸಿಟಿಗಳನ್ನು ಪ್ರಾರಂಭಿಸುತ್ತಿದ್ದೇವೆ. ಆದರೆ, ಅದಕ್ಕೆ ಬೇಕಾದ ಸೌಲಭ್ಯಗಳ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ ಇನ್ನು ಮುಂದೆ ಅದಕ್ಕೂ ಗಮನಕೊಡುತ್ತೇವೆ ಎಂದರು.

ಖಾಸಗಿ ಪಿಯು ಕಾಲೇಜುಗಳಲ್ಲಿ ತರಗತಿಗಳನ್ನು ಎಪ್ರಿಲ್‌ನಿಂದಲೇ ಪ್ರಾರಂಭಿಸುತ್ತಾರೆ. ನಮ್ಮ ಸರಕಾರಿ ಪಿಯು ಕಾಲೇಜುಗಳಲ್ಲಿ ಮೇ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಉಪನ್ಯಾಸಕರು ಒಂದು ಒಮ್ಮತಕ್ಕೆ ಬಂದರೆ ಸರಕಾರಿ ಪಿಯು ಕಾಲೇಜುಗಳನ್ನು ಎಪ್ರಿಲ್‌ನಲ್ಲಿ ಪ್ರಾರಂಭಮಾಡಬಹುದು ಎಂದರು.
ಸರಕಾರಿ ಕಾಲೇಜುಗಳ ಅಭಿವೃದ್ಧಿಗೆ 120 ಕೋಟಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸರಕಾರಿ ಕಾಲೇಜುಗಳ ಅಭಿವೃದ್ಧಿಗಾಗಿ 120 ಕೋಟಿ ರೂ. ನೀಡಲಾಗುವುದು. ಒಂದೇ ಹಂತದಲ್ಲಿ ರಾಜ್ಯದಲ್ಲಿ ಎಲ್ಲ ಗ್ರಾಮೀಣ ಭಾಗದಲ್ಲಿಯೂ ಕಾಲುವೆ ಸೇತುವೆಯನ್ನು ನಿರ್ಮಿಸಲಾಗುವುದು. ಯಾವುದೇ ಮಗು ಸಾವನ್ನಪ್ಪದ ರೀತಿಯಲ್ಲಿ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಕೇಂದ್ರಗಳಲ್ಲಿ ಸರಕಾರಿ ಕಾಲೇಜುಗಳಲ್ಲಿ ಸಂಜೆ ಕಾಲೇಜುಗಳನ್ನು ಪ್ರಾರಂಭಿಸಿ, ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಕಾಲೇಜಿನ ಹೊರ ಆವರಣದಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಬೇಕು ಎಂದು ಪ್ರಾಧ್ಯಾಪಕರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇದನ್ನು ಜಾರಿ ಮಾಡಲು ಕ್ರಮ ವಹಿಸಲಾಗುತ್ತದೆ. ಬೆಂಗಳೂರಿನ ಮಧ್ಯ ಭಾಗದಲ್ಲಿ ಐದು ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಇಲ್ಲಿ, ಮುಂಬರುವ ಮೇ-ಜೂನ್ ತಿಂಗಳಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಸಂಜೆ ಕಾಲೇಜು ಆರಂಭ: ಜಿಲ್ಲಾ ಕೇಂದ್ರಗಳಲ್ಲಿ ಸರಕಾರಿ ಸಂಜೆ ಕಾಲೇಜುಗಳಿಗೆ ಆದ್ಯತೆ ನೀಡಿ. ಇಲ್ಲಿ ಬಡವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಿಲ್ಲಾ ಕೇಂದ್ರಗಳಲ್ಲಿ ಸಂಜೆ ಸರಕಾರಿ ಕಾಲೇಜುಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದರು.

ಬೆಂಗಳೂರು ವಿವಿ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಮಾತನಾಡಿ, ಪದವಿ ಇದೆಯಾದರೂ, ಉದ್ಯೋಗವಿಲ್ಲ ಎನ್ನುವ ದೂರುಗಳಿವೆ. ಆದರೆ, ಪದವಿಗೂ ಉದ್ಯೋಗಕ್ಕೂ ಸಂಬಂಧವೇ ಇಲ್ಲ. ಎಷ್ಟೇ ಪದವಿಗಳಿದ್ದರೂ ಅದಕ್ಕೆ ಬೇಕಾದ ಕೌಶಲ್ಯಗಳನ್ನು ರೂಢಿಸಿಕೊಳ್ಳದಿದ್ದರೆ ಉದ್ಯೋಗ ಸಿಗುವುದಿಲ್ಲ. ಪದವಿಯ ಜೊತೆಗೆ ಆ ಕ್ಷೇತ್ರ ಅಪೇಕ್ಷಿಸುವ ಕೌಶಲ್ಯವನ್ನೂ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಚಿಂತಕ ಡಾ.ಜಿ.ರಾಮಕೃಷ್ಣ, ರಾಯಚೂರು ವಿವಿಯ ವಿಶೇಷಾಧಿಕಾರಿ ಪ್ರೊ.ಮುಜಾಫರ್ ಅಸಾದಿ, ಸರಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಸಿ.ಕೆ.ಲೋಕಪ್ಪ ಗೌಡ, ಬಿ.ಕೆ.ಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ಮುಂಗಾರಿನ ಸಮಯದಲ್ಲಿ ರಸ್ತೆಗಳಿಲ್ಲದೇ ನದಿ ಸೇತುವೆ ದಾಟುತ್ತಿದ್ದ ಸಂದರ್ಭದಲ್ಲಿ ಮಗುವೊಂದು ಮೃತಪಟ್ಟ ಘಟನೆ ನಡೆದಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಅಂತಹ ಗ್ರಾಮಗಳಲ್ಲಿ ಸೇತುವೆ ಕಟ್ಟಲು ತೀರ್ಮಾನಿಸಲಾಗಿದೆ. ಅಲ್ಲದೆ, ಹೆಣ್ಣು ಮಕ್ಕಳಿಗೆ ಪದವಿ ಶಿಕ್ಷಣದವರೆಗೂ ಸರಕಾರಿ ಶಾಲಾ-ಕಾಲೇಜುಗಳಲ್ಲಿ ಶುಲ್ಕ ರಹಿತ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಿ ಆದೇಶ ನೀಡಲಾಗಿದೆ.
- ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News