ಕುಮಾರಸ್ವಾಮಿಯಿಂದ ದಲಿತ ದೌರ್ಜನ್ಯ ಕಾಯ್ದೆ ದುರ್ಬಳಕೆ: ಬಾಳೂರು ರಮೇಶ್ ಆರೋಪ

Update: 2019-02-21 18:04 GMT

ಚಿಕ್ಕಮಗಳೂರು, ಫೆ.21: ಮೂಡಿಗೆರೆ ತಾಲೂಕು ಕಲ್ಮನೆ ಗ್ರಾಮದ ಲೋಕೇಶ್‌ರವರಿಗೆ ಸೇರಿದ ಸ.ನಂ.49ರಲ್ಲಿರುವ 7 ಎಕರೆ ಜಮೀನನ್ನು ಮೂಡಿಗೆರೆ ಶಾಸಕ ಕುಮಾರಸ್ವಾಮಿ ಕಬಳಿಸುವ ಯತ್ನ ನಡೆಸುತ್ತಿದ್ದಾರೆ. ಇವರ ಹೆಸರಿಗೆ ಆ ಜಮೀನಿನ ದಾಖಲಾತಿಗಳಿದ್ದರೆ ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಬಾಳೂರು ರಮೇಶ್ ಸವಾಲೆಸೆದಿದ್ದಾರೆ.

ಗುರುವಾರ ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು, ಲೋಕೇಶ್‌ರವರ ಜಮೀನನ್ನು ಕಬಳಿಸುವ ಉದ್ದೇಶದಿಂದ ತಮ್ಮ ಜಮೀನಿನಲ್ಲಿ ಬೆಳೆದ ಕಾಫಿಯನ್ನು ಸ್ಥಳದಲ್ಲಿ ವಾಸವಿರುವ ಲೋಕೇಶ್ ಕುಟುಂಬವನ್ನು ಬೆದರಿಸಿ 200ರಿಂದ 300 ಮಂದಿ ದಬ್ಬಾಳಿಕೆ ಮಾಡಿ ಕೊಯ್ಲು ಮಾಡಿ ಕದ್ದು ಸಾಗಿಸಿದ್ದಾರೆಂದು ಆರೋಪಿಸಿದರು.

ಪರಿಶಿಷ್ಟ ಜಾತಿಯವರಾಗಿರುವ ಕುಮಾರಸ್ವಾಮಿಯವರು ಶಾಸಕರಾಗಿದ್ದು, ಬಡ ಪರಿಶಿಷ್ಟರಿಗೆ ಸಹಾಯ ಮಾಡುವ ಬದಲು ಅವರ ಭೂಮಿಯನ್ನು ಕಬಳಿಸಲು ಪ್ರಯತ್ನ ನಡೆಸುತ್ತಿರುವುದು ಖಂಡನೀಯ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಸಿದ ಕೆಲವರ ಮೇಲೆ ಅಸ್ಪಶ್ಯತಾ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿರುವುದು ಶಾಸಕ ಸ್ಥಾನಕ್ಕೆ ಅಗೌರವ ಮಾಡಿದಂತಾಗುತ್ತದೆ ಎಂದರು.

ಇತ್ತೀಚೆಗೆ ಬಾಳೂರು ಪೋಲೀಸ್ ಠಾಣೆ ಎದುರು ಜೆಡಿಎಸ್, ಸಿಪಿಐ, ಬಿಎಸ್ಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕಂದಾಯಾಧಿಕಾರಿಯವರು, ಕಲ್ಮನೆ ಗ್ರಾಮದ ಸ.ನಂ.49ರಲ್ಲಿ ಶಾಸಕ ಕುಮಾರಸ್ವಾಮಿ ಹೆಸರಿಗಾಗಲಿ, ಅವರ ತಾಯಿ ಹೆಸರಿ ಗಾಗಲಿ ಯಾವುದೇ ಜಮೀನು ಇರುವುದಿಲ್ಲ ಹಾಗೂ ಅವರು ಭೂ ಮಂಜೂರಾತಿ ಕೋರಿ ಸಲ್ಲಿಸಿರುವ ಯಾವುದೇ ಅರ್ಜಿಯು ಇರುವುದಿಲ್ಲ ಎಂದು ಮಾಹಿತಿ ಹಕ್ಕಿನಡಿ ಕಂದಾಯ ಇಲಾಖೆ ಮಾಹಿತಿ ನೀಡಿದ್ದಾರೆ ಎಂದು ರಮೇಶ್ ಸ್ಪಷ್ಟ ಪಡಿಸಿದರು.

ಕಲ್ಮನೆ ಗ್ರಾಮದ ನೊಂದ ದಲಿತ ಲೋಕೇಶ್ ಮಾತನಾಡಿ, ನೊಂದವರ ನೆರವಿಗೆ ಬರಬೇಕಾದ ಶಾಸಕರು ದಲಿತರಾಗಿದ್ದರೂ ಬಡ ದಲಿತರನ್ನೇ ಶೋಷಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಿಪಿಐನ ಮುಖಂಡರಾದ ರಾಧಾ ಸುಂದ್ರೇಶ್, ಮೂಡಿಗೆರೆಯ ರವಿಕುಮಾರ್, ಲಕ್ಷ್ಮಣ್‌ಕುಮಾರ್, ಲೋಕೇಶ್, ಚಂದ್ರು, ಗೋಪಾಲಶೆಟ್ಟಿ, ಸುಂದರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News