ಸಚಿವ ಜಿ.ಟಿ.ದೇವಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರ ನಡುವೆ ಮಾತಿನ ಚಕಮಕಿ

Update: 2019-02-21 18:14 GMT

ಮೈಸೂರು,ಫೆ.21: ಮೈಸೂರು ತಾಲ್ಲೂಕಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ವೇಳೆ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಸಚಿವ ಜಿ.ಟಿ.ದೇವೇಗೌಡ ಗರಂ ಆದ ಘಟನೆ ನಡೆದಿದೆ.

ಚಾಮುಂಡೇಶ್ವರಿ ಕ್ಷೇತ್ರದ ಕೆ.ಸಾಲುಂಡಿ ಗ್ರಾಮದಲ್ಲಿ  ಗುರುವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯ ನಡೆಯುತ್ತಿತ್ತು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಮತ್ತು ಸಚಿವ ಜಿ.ಟಿ ದೇವೇಗೌಡರ ನಡುವೆ ವಾಗ್ವಾದ ನಡೆದಿದೆ.

ಗ್ರಾಮದೊಳಗೆ ದುರ್ವಾಸನೆ ಬರುತ್ತಿದೆ, ಬಂದು ಪರಿಶೀಲಿಸಿ ಎಂದು ಗ್ರಾಮಸ್ಥರು ಸಚಿವ ಜಿ.ಟಿ ದೇವೇಗೌಡರನ್ನು ಒತ್ತಾಯಿಸಿದ್ದಾರೆ. ಆದರೆ ಈ ವೇಳೆ ಗರಂ ಆದ ಸಚಿವ ಜಿ.ಟಿ ದೇವೇಗೌಡ, ನೀವ್ ನಂಗೆ ವೋಟ್ ಹಾಕಿದ್ದೀರಾ..? ನೀವೆಲ್ಲಾ ಸಿದ್ದರಾಮಯ್ಯನವರಿಗೆ ವೋಟ್ ಹಾಕಿರೋದು. ನಾನ್ಯಾಕೆ ಬಂದು ನೋಡಲಿ ಎಂದು ಕೆಂಡಾಮಂಡಲರಾದ ಘಟನೆ ನಡೆಯಿತು.

ಇದರಿಂದ ಬೇಸರಗೊಂಡ ಗ್ರಾಮಸ್ಥರು, ಹಾಗಿದ್ದ ಮೇಲೆ ನಮ್ಮ ಗ್ರಾಮಕ್ಕೆ ಏಕೆ ಬಂದಿದ್ದೀರಿ, ನೀವು ಕ್ಷೇತ್ರದ ಶಾಸಕ ನಂತರ ಸಚಿವ, ನೀವು ಸಚಿವರಾಗಿದ್ದೀರಿ ಎಂದು ಬಾಯಿಗೆ ಬಂದಹಾಗೆ ಮಾತನಾಡಬೇಡಿ ಎಂದು ಸಚಿವರ ಜೊತೆ ಮಾತಿಗಿಳಿದರು. ಇದರಿಂದ ಕೋಪಗೊಂಡ ಸಚಿವ ಜಿ.ಟಿ.ದೇವೇಗೌಡ ಏರುದನಿಯಲ್ಲಿ ಮಾತನಾಡಿದರು. 

ಈ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯ ಬೀರಿಹುಂಡಿ ಬಸವಣ್ಣ ಮತ್ತು ಸಿದ್ದರಾಮಯ್ಯ ಬೆಂಬಲಿಗರ ನಡುವೆ ವಾಗ್ವಾದ ನಡೆದಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News