ಕನ್ನಡ ಸಿನೆಮಾ ಬೆಳವಣಿಗೆಗೆ ನೀಲ ನಕ್ಷೆ ಕೊಟ್ಟರೆ ಸಂಪೂರ್ಣ ಸಹಕಾರ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-02-21 18:25 GMT

ಬೆಂಗಳೂರು, ಫೆ.21: ಕನ್ನಡ ಸಿನೆಮಾ ಕ್ಷೇತ್ರದ ದಿಗ್ಗಜರು ಕನ್ನಡ ಸಿನೆಮಾ ಬೆಳವಣಿಗೆಗೆ ಸಂಬಂಧಿಸಿದಂತೆ ನೀಲ ನಕ್ಷೆ ರೂಪಿಸಿಕೊಟ್ಟರೆ, ಅದಕ್ಕೆ ರಾಜ್ಯ ಸರಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ 11ನೆ ಅಂತರ್‌ರಾಷ್ಟ್ರೀಯ ಸಿನೆಮೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಸಿನೆಮಾ ಕ್ಷೇತ್ರ ಇವತ್ತು ಸಿನೆಮಾ ಮಂದಿರ, ಬಜೆಟ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಇವೆಲ್ಲವುಗಳನ್ನು ಪರಿಹರಿಸಲು ಸರಕಾರ ಬದ್ಧವಾಗಿದೆ ಎಂದರು.

ಸಿನೆಮಾಗಳ ಹಣ ಗಳಿಕೆಯ ವಿಷಯದಲ್ಲಿ ಮಾಧ್ಯಮಗಳು ತಪ್ಪುಮಾಹಿತಿಯನ್ನು ನೀಡುತ್ತಿವೆ. ಪ್ರದರ್ಶನಗೊಂಡ ಮೊದಲ ದಿನವೆ ಕೋಟಿ ಗಳಿಸಿದೆ ಎಂದು ಪ್ರಸಾರ ಮಾಡುತ್ತಾರೆ. ಇದನ್ನು ನಂಬುವ ಕೆಲವರು ತಮ್ಮ ಆಸ್ತಿಗಳನ್ನು ಮಾರಾಟ ಮಾಡಿ ಸಿನೆಮಾ ನಿರ್ಮಿಸಿ ನಷ್ಟ ಅನುಭವಿಸಿ ಆತ್ಮಹತ್ಯೆಗೆ ಶರಣಾಗುವಂತಹ ವಾತಾವರಣ ನಿರ್ಮಾಣ ಆಗಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, 11ನೆ ಬೆಂಗಳೂರು ಅಂತರ್‌ರಾಷ್ಟ್ರೀಯ ಸಿನೆಮೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಎಲ್ಲ ಸಿನೆಮಾಗಳು ಅತ್ಯುತ್ತಮವಾಗಿವೆ. ಇದರ ಜೊತೆಗೆ ಸಿನೆಮಾ ಕುರಿತು ವಿಚಾರಸಂಕಿರಣ ಹಾಗೂ ಸಂವಾದ ಕಾರ್ಯಕ್ರಮ ಯೋಜಿಸಲಾಗಿದೆ ಎಂದರು.

ಇವತ್ತು ಸಿನೆಮಾ ಮಂದಿರಗಳ ಬಾಡಿಗೆ ದುಬಾರಿಯಾಗುತ್ತಿದೆ. ಇದರಿಂದ ನಿರ್ಮಾಪಕ ಉಸಿರುಗಟ್ಟುವ ವಾತಾವರಣವಿದೆ. ಇದಕ್ಕೆ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಜನತಾ ಸಿನೆಮಾ ಮಂದಿರಗಳ ಸ್ಥಾಪನೆಗಿರುವ ಕಾನೂನು ತೊಡಕನ್ನು ನಿವಾರಿಸಬೇಕೆಂದು ತಿಳಿಸಿದರು.

ಪ್ರತಿ ವರ್ಷ ಬಿಡುಗಡೆಯಾಗುತ್ತಿರುವ ಸಿನೆಮಾಗಳ ಸಂಖ್ಯೆ ಹೆಚ್ಚಳ ಆಗುತ್ತಿದೆ. ಆದರೆ, ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಬಸ್ ನಿಲ್ದಾಣಗಳಲ್ಲಿ ಮಿನಿ ಚಿತ್ರಮಂದಿರಗಳನ್ನು ನಿರ್ಮಿಸುವ ಮೂಲಕ ಸಿನೆಮಾ ಕ್ಷೇತ್ರಕ್ಕೆ ಆಸರೆಯಾಗಬೇಕೆಂದು ಅವರು ಹೇಳಿದರು.

ಹಿರಿಯ ನಟ ಅನಂತನಾಗ್ ಮಾತನಾಡಿ, ಜಗತ್ತಿನ ಎಲ್ಲ ಕಡೆಗಳಿಂದ ಸಿನೆಮಾಸಕ್ತರು ಬಂದಿರುವುದು ಖುಷಿಯ ವಿಚಾರವಾಗಿದೆ. ಯುವ ಜನತೆ ಸಿನೆಮೋತ್ಸವದಲ್ಲಿ ಭಾಗವಹಿಸಿ ಹೆಚ್ಚಿನ ಅರಿವನ್ನು ಪಡೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕ ರಾಹುಲ್ ರವೈಲ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ವಾರ್ತಾ ಇಲಾಖೆಯ ಕಾರ್ಯದರ್ಶಿ ಪಂಕಜ್‌ಕುಮಾರ್ ಪಾಂಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಿನೆಮಾಗೆ ಬೇಕಿರುವುದು ಉತ್ತಮವಾದ ಚಿತ್ರಕತೆಯೆ ಹೊರತು ಕೋಟ್ಯಂತರ ರೂ.ಬಜೆಟ್ ಅಲ್ಲ. ಉತ್ತಮ ಕತೆಯನ್ನಾಧರಿಸಿದ ಸಿನೆಮಾ ಕಡಿಮೆ ಬಜೆಟ್ ಹೊಂದಿದ್ದರು ಉತ್ತಮ ಹಣ ಗಳಿಸಿದ ಬಗ್ಗೆ ಅನೇಕ ಉದಾಹರಣೆಗಳಿವೆ. ಈ ಬಗ್ಗೆ ನಿರ್ದೇಶಕರು, ನಿರ್ಮಾಪಕರು ಗಮನ ಹರಿಸಬೇಕು.
ಎಚ್.ಡಿ.ಕುಮಾರಸ್ವಾಮಿ,  ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News