ನಮಗೆ ಒಂದು ಸ್ಥಾನವನ್ನೂ ನೀಡಿಲ್ಲ: ಬಿಜೆಪಿ- ಶಿವಸೇನೆ ಮೈತ್ರಿಗೆ ಆರ್‌ಪಿಐ ಅಸಮಾಧಾನ

Update: 2019-02-22 04:44 GMT

ಹೊಸದಿಲ್ಲಿ, ಫೆ. 22: ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವೆ ನಡೆದ ಮೈತ್ರಿಗೆ ಎನ್‌ಡಿಎ ಪಾಲುದಾರ ಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಶಿವಸೇನೆ ಹಾಗೂ ಬಿಜೆಪಿ ನಡುವಿನ ಮುನಿಸು ಶಮನಗೊಳಿಸಲು ನಾನು ಪ್ರಯತ್ನ ನಡೆಸಿದರೂ ಸೀಟು ಹಂಚಿಕೆ ವೇಳೆ ನಮಗೆ ಒಂದು ಸ್ಥಾನವನ್ನೂ ಬಿಟ್ಟುಕೊಟ್ಟಿಲ್ಲ ಎಂದು ಪಕ್ಷದ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ರಾಮದಾಸ್ ಅಠಾವಳೆ ಹೇಳಿದ್ದಾರೆ.

"ಬಿಜೆಪಿ-ಸೇನಾ ನಡುವಿನ ಸಂಷರ್ಘ ಶಮನ ಮಾಡಿ ಮೈತ್ರಿ ಏರ್ಪಡಲು ನಾನು ಸಾಕಷ್ಟು ಶ್ರಮ ವಹಿಸಿದ್ದೆ. ಆದರೆ ಆರ್‌ಪಿಐಗೆ ಒಂದು ಸ್ಥಾನವನ್ನೂ ನೀಡದೇ, ತತ್ತರಿಸುವಂತೆ ಮಾಡಿದೆ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂಬೈ ದಕ್ಷಿಣ ಕೇಂದ್ರ ಲೋಕಸಭಾ ಸ್ಥಾನಕ್ಕಾಗಿ ನಾನು ಆಗ್ರಹ ಮುಂದಿಟ್ಟಿದ್ದೆ. ಆದರೆ ಯಾವುದೇ ಸ್ಥಾನಗಳನ್ನು ನಮ್ಮ ಪಕ್ಷಕ್ಕೆ ನೀಡಲು ಅವರು ನಿರಾಕರಿಸಿದ್ದಾರೆ ಎಂದು ದಲಿತ ಮುಖಂಡರೂ ಆಗಿರುವ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬೈ ಉತ್ತರ ಕೇಂದ್ರ ಕ್ಷೇತ್ರದಿಂದ ಈ ಹಿಂದೆ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು. ಪ್ರಸ್ತುತ ದಕ್ಷಿಣ- ಕೇಂದ್ರ ಕ್ಷೇತ್ರ ಶಿವಸೇನೆ ವಶದಲ್ಲಿದೆ.

ವಿಧಾನಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ಸಮಾನ ಸ್ಥಾನಗಳಿಗೆ ಸ್ಪರ್ಧಿಸಲಿವೆ ಹಾಗೂ ಲೋಕಸಭೆಯಲ್ಲಿ ಶಿವಸೇನೆ 23 ಹಾಗೂ ಬಿಜೆಪಿ 25 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿವೆ. 2014ರ ಚುನಾವಣೆಯಲ್ಲಿ ಉಭಯ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಆದರೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News