370ನೇ ವಿಧಿಯನ್ನು ಮುಟ್ಟಬೇಡಿ: ಕೇಂದ್ರ ಸರ್ಕಾರಕ್ಕೆ ನಿತೀಶ್ ಎಚ್ಚರಿಕೆ

Update: 2019-02-22 09:38 GMT

ಪಾಟ್ನಾ, ಫೆ.22: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಬೇಕು ಎಂಬ ಕರೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಹಾರದ ಮುಖ್ಯಮಂತ್ರಿ ಹಾಗೂ ಎನ್ ಡಿಎ ಮಿತ್ರಪಕ್ಷ ಜೆಡಿಯು ಮುಖಂಡ ನಿತೀಶ್ ಕುಮಾರ್, ಈ ವಿಷಯಕ್ಕೆ ಕೈಹಾಕದಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

ಪುಲ್ವಾಮಾ ದಾಳಿಯ ಬಳಿಕ 370ನೇ ವಿಧಿ ರದ್ದುಪಡಿಸಬೇಕು ಎಂಬ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಸಲಹೆ ಮಾಡಿರುವ ಅವರು, ಪುಲ್ವಾಮಾ ಘಟನೆ ಹಿನ್ನೆಲೆಯಲ್ಲಿ ಕಾಶ್ಮೀರ ಅಥವಾ ಕಾಶ್ಮೀರಿಗಳ ಬಗ್ಗೆ ತಪ್ಪು ಭಾವನೆ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"370ನೇ ವಿಧಿಗೆ ಸಂಬಂಧಿಸಿದಂತೆ ನಮ್ಮ ನಿಲುವು ನಿಮಗೆ ತಿಳಿದಿದೆ. ಸಂವಿಧಾನದಲ್ಲಿ 370ನೇ ವಿಧಿಗೆ ಅವಕಾಶ ಕಲ್ಪಿಸಲಾಗಿದ ಎಂದಾದ ಮೇಲೆ ಆ ಬಗ್ಗೆ ಯಾವ ಚರ್ಚೆಯೂ ಅಗತ್ಯವಿಲ್ಲ ಎಂದು ನಮ್ಮ ನಿಲುವನ್ನು ಮತ್ತೆ ಸ್ಪಷ್ಟಪಡಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

370ನೇ ವಿಧಿ ರದ್ದುಪಡಿಸಿದರೆ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

"ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಏನು ಕ್ರಮ ಬೇಕೋ ಅದನ್ನು ಕೈಗೊಳ್ಳಿ. ಆ ಬಗ್ಗೆ ಯಾವ ಚರ್ಚೆಯೂ ಇಲ್ಲ. ಆದರೆ ನೀವು 370ನೇ ವಿಧಿ ವಿಚಾರವನ್ನು ಮುಟ್ಟಬೇಕು ಎಂಬ ಅರ್ಥವಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. 370ನೇ ವಿಧಿಗೆ ಸಂಬಂಧಿಸಿದಂತೆ ಹೊಂದಿರುವ ಬಿಜೆಪಿ ನಿಲುವಿಗೆ ಈ ಮೂಲಕ ಬಿಹಾರ ಸಿಎಂ ಸ್ಪಷ್ಟ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News