ಲೋಕಸಭಾ ಕ್ಷೇತ್ರವಾರು ಮುಖಂಡರ ಸಭೆ ಕರೆದ ಎಚ್.ಡಿ.ದೇವೇಗೌಡ

Update: 2019-02-22 15:16 GMT

ಬೆಂಗಳೂರು, ಫೆ.22: ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವ ಸಂಬಂಧ ಮಹತ್ವದ ಚರ್ಚೆ ನಡೆಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಲೋಕಸಭಾ ಕ್ಷೇತ್ರವಾರು ಮುಖಂಡರ ಸಭೆ ಕರೆದಿದ್ದಾರೆ.

ನಗರದ ಶೇಷಾದ್ರಿಪುರಂ ಬಳಿಯಿರುವ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿಂದು ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರದ ಕಾರ್ಯಕರ್ತರು, ಮುಖಂಡರೊಂದಿಗೆ ಚರ್ಚೆ ನಡೆಸಿದ ದೇವೇಗೌಡರು, ಫೆ.24ರಂದು ಉತ್ತರ ಕನ್ನಡ, ಶಿವಮೊಗ್ಗ, ವಿಜಯಪುರ, ರಾಯಚೂರು, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಮುಖಂಡರ ಸಭೆ ನಡೆಸಲಿದ್ದಾರೆ.

ಮುಖಂಡರ ಜೊತೆ ಚರ್ಚೆ ವೇಳೆ ಕಾಂಗ್ರೆಸ್ ಪಕ್ಷದೊಂದಿಗೆ ಮಾಡಿಕೊಳ್ಳುತ್ತಿರುವ ಸೀಟುಗಳ ಹಂಚಿಕೆ, ಚುನಾವಣಾ ಪ್ರಚಾರ ತಂತ್ರಗಾರಿಕೆ, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವುದು ಸೇರಿದಂತೆ ಇನ್ನಿತರ ಮಹತ್ವದ ವಿಷಯಗಳ ಕುರಿತು ದೇವೇಗೌಡ ಚರ್ಚೆ ನಡೆಸುತ್ತಿದ್ದಾರೆ.

ದೇವೇಗೌಡರ ಜೊತೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಸಚಿವ ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಇನ್ನಿತರ ಪ್ರಮುಖ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವುದರಿಂದ ಸ್ಥಳೀಯವಾಗಿ ಕಾರ್ಯಕರ್ತರ ನಡುವೆ ಹೊಂದಾಣಿಕೆ ಮೂಡಿಸುವ ಕುರಿತು ಚರ್ಚೆ ನಡೆಯಲಿದೆ.

28 ಲೋಕಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ 12 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್ ಎದುರು ಬೇಡಿಕೆ ಇಡಲು ಮುಂದಾಗಿದೆ. ಜೆಡಿಎಸ್ ಕೇಳುತ್ತಿರುವ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ನ ಹಾಲಿ ಸಂಸದರು ಇರುವ ಕೆಲವು ಕ್ಷೇತ್ರಗಳಿವೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News