ಲೋಕಸಭೆ ಚುನಾವಣೆ ಬಳಿಕ ಮೈತ್ರಿ ಸರಕಾರ ಪತನ: ಯಡಿಯೂರಪ್ಪ ಭವಿಷ್ಯ

Update: 2019-02-22 15:18 GMT

ಬೀದರ್, ಫೆ. 22: ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತಿ ಸರಕಾರ ಅಧಿಕಾರದಲ್ಲಿ ಇರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ.

ಶುಕ್ರವಾರ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ಪಕ್ಷದಿಂದ ಏರ್ಪಡಿಸಿದ್ದ ‘ಮೋದಿ ವಿಜಯ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, ಬೀದರ್, ಕಲಬುರಗಿ ಸೇರಿ ರಾಜ್ಯದ 22 ಲೋಕಸಭಾ ಕ್ಷೇತ್ರಗಳಿಂದ ಬಿಜೆಪಿ ಜಯಗಳಿಸಲಿದ್ದು, ಮೋದಿ ನೇತೃತ್ವದ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ನಿರೀಕ್ಷೆಯಂತೆ ಲೋಕಸಭಾ ಚುನಾವಣೆ ಫಲಿತಾಂಶ ಬಂದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಇರುವುದಿಲ್ಲ. ಇದರ ಬಗ್ಗೆ ಯಾವುದೇ ಸಂದೇಹ ಬೇಡ ಎಂದು ಯಡಿಯೂರಪ್ಪ ಇದೇ ವೇಳೆ ಸ್ಪಷ್ಟಪಡಿಸಿದರು.

‘ಆಪರೇಷನ್ ಕಮಲ’ ಆಡಿಯೋ ಪ್ರಕರಣವನ್ನು ಮುಂದಿಟ್ಟುಕೊಂಡು ಮೈತ್ರಿ ಸರಕಾರ ನನ್ನ ವಿರುದ್ಧ ದ್ವೇಷದ ರಾಜಕಾರಣ ಮಾಡಲು ಹೊರಟ್ಟಿದ್ದರು. ಆದರೆ, ಕೋರ್ಟ್ ನನಗೆ ನ್ಯಾಯವನ್ನು ಒದಗಿಸಿಕೊಟ್ಟಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನನಗೆ ಅನ್ಯಾಯ ಆಗಲಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News