ಚಿಕ್ಕಮಗಳೂರು: ನದಿಯಲ್ಲಿ ಈಜಲು ಹೋದ ವ್ಯಕ್ತಿ ಮೃತ್ಯು

Update: 2019-02-22 15:33 GMT

ಚಿಕ್ಕಮಗಳೂರು,ಫೆ.22: ಭದ್ರಾ ನದಿಯಲ್ಲಿ ಈಜಲು ಹೋದ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದ್ದು, ಮುಳುಗು ತಜ್ಞರು ಕೆಲ ಗಂಟೆಗಳ ಕಾಲ ಶೋಧ ನಡೆಸಿದ ಬಳಿಕ ಶವ ಪತ್ತೆಯಾಗಿದೆ. 

ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಕೋಗಿಲೆ ಗ್ರಾಮದ ಕೇಶವಮೂರ್ತಿ (34) ಎಂಬವರು ಭದ್ರಾನದಿಯಲ್ಲಿ ಈಜಲು ಹೋಗಿ ಮೃತಪಟ್ಟ ವ್ಯಕ್ತಿ. ಕೇಶವಮೂರ್ತಿ ಶುಕ್ರವಾರ ಬೆಳಿಗ್ಗೆ ತಮ್ಮ ಮನೆಯಿಂದ ಈಜಲು ಹೋಗುವುದಾಗಿ ಹೇಳಿ ಮನೆ ಸಮೀಪದ ಭದ್ರಾ ನದಿಗೆ ಬಂದಿದ್ದರು. ಗಂಟೆಗಳಿಗೂ ಹೆಚ್ಚು ಕಾಲ ಈಜುಲು ಹೋದವರು ಹಿಂದಿರುಗದಿದ್ದರಿಂದ ಅನುಮಾನಗೊಂಡ ಮನೆಯವರು ನದಿಯ ಬಳಿ ಹೋಗಿ ನೋಡಿದಾಗ ಕೇಶವಮೂರ್ತಿ ಅವರ ಬಟ್ಟೆ ಮತ್ತು ಇತರೆ ವಸ್ತುಗಳು ನದಿ ತೀರದಲ್ಲಿ ಕಂಡು ಬಂದಿದೆ. ಕೂಡಲೇ ಅವರು ಬಾಳೆಹೊನ್ನೂರು ಪೊಲೀಸ್ ಠಾಣೆ ಸುದ್ದಿ ಮುಟ್ಟಿಸಿದ್ದಾರೆ. 

ಸ್ಥಳಕ್ಕೆ ಬಂದ ಪೊಲೀಸರು ನುರಿತ ಮುಳುಗು ತಜ್ಞರಿಂದ ನದಿಯಲ್ಲಿ ಕೇಶಮೂರ್ತಿಗಾಗಿ ಶೋಧ ನಡೆಸಿದ್ದು ಸುಮಾರು ಎರಡು ಗಂಟಗಳ ನಂತರ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. 

ಕೇಶವಮೂರ್ತಿ ಅವರ ಶವದ ತಲೆಭಾಗದಲ್ಲಿ ಗಾಯದ ಗುರುತು ಕಂಡು ಬಂದಿದ್ದು, ನದಿಗೆ ಹಾರಿದಾಗ ಇಲ್ಲವೇ ಈಜುವಾಗ ಕಲ್ಲು ತಲೆಗೆ ಬಡಿದು ಅವರು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News