ಡಿಕೆಶಿಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗಲು ಒತ್ತಾಯಿಸಿದರೆ ಅರ್ಜಿ ಸಲ್ಲಿಸಿ: ಹೈಕೋರ್ಟ್

Update: 2019-02-22 17:08 GMT

ಬೆಂಗಳೂರು, ಫೆ.22: ಆದಾಯ ತೆರಿಗೆ(ಐಟಿ) ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅವರು ಸಚಿವ ಡಿ.ಕೆ.ಶಿವಕುಮಾರ್‌ಗೆ ವಿಚಾರಣೆಗೆ ಹಾಜರಾಗಲೇಬೇಕೆಂದು ಒತ್ತಾಯ ಮಾಡಿದರೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸೂಚಿಸಿದ ಹೈಕೋರ್ಟ್, ವಿಚಾರಣೆಯನ್ನು ಮಾ.7ಕ್ಕೆ ಮುಂದೂಡಿದೆ.

ಇಡಿ ನೀಡಿರುವ ಸಮನ್ಸ್ ರದ್ದುಗೊಳಿಸಬೇಕು ಎಂದು ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಶಿವಕುಮಾರ್ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಅರ್ಜಿದಾರರು ಕಾಲಕಾಲಕ್ಕೆ ಕಾನೂನು ಬದ್ಧವಾಗಿ ತೆರಿಗೆ ಪಾವತಿ ಮಾಡಿದ್ದಾರೆ. ಐಟಿ ದಾಳಿ ನಡೆದ ಸಂದರ್ಭದಲ್ಲಿ ತೆರಿಗೆ ಪಾವತಿಸಲು ಇನ್ನೂ ಕಾಲಾವಕಾಶ ಇತ್ತು. ಹೀಗಾಗಿ, ಐಟಿ ನೀಡಿರುವ ಸಮನ್ಸ್‌ಗೆ ತಡೆ ನೀಡಬೇಕು. ಅಲ್ಲದೆ, ಡಿ.ಕೆ.ಶಿವಕುಮಾರ್ ಅವರು ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗಲೇಬೇಕೆಂದು ಇಡಿ ಅವರು ಒತ್ತಾಯಿಸಿದರೆ ಏನು ಮಾಡಬೇಕೆಂದು ಪೀಠಕ್ಕೆ ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಹಾಗೇನಾದರೂ ಡಿಕೆಶಿ ಅವರಿಗೆ ಇಡಿ ಅವರು ಕಡ್ಡಾಯವಾಗಿ ಹಾಜರಾಗಲೇಬೇಕೆಂದು ಸೂಚಿಸಿದರೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಎಂದು ಕಪಿಲ್ ಸಿಬಲ್ ಅವರಿಗೆ ತಿಳಿಸಿತು. ಹಾಗೂ ಜಾರಿ ನಿರ್ದೇಶನಾಲಯದ(ಇಡಿ) ಮುಂದೆ ವಿಚಾರಣೆಗೆ ಹಾಜರಾಗಬೇಕಿರುವ ಸಚಿವ ಡಿ.ಕೆ.ಶಿವಕುಮಾರ್ ಒಂದು ವೇಳೆ ಕಾಲಾವಕಾಶ ಕೋರಿದರೆ ಅದನ್ನು ಪರಿಗಣಿಸಿ ಎಂದು ಹೈಕೋರ್ಟ್ ಇ.ಡಿಗೆ ನಿರ್ದೇಶಿಸಿತು. ಕಳೆದ ವರ್ಷ ಡಿಕೆಶಿ ಮೇಲಿನ ದಾಳಿಯ ನಂತರ ಇಡಿಗೆ ಐಟಿ ಮಾಹಿತಿ ರವಾನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಡಿ ಪ್ರಕರಣ ದಾಖಲಿಸಿ ಡಿಕೆಶಿ ಹಾಗೂ ಆಪ್ತರಿಗೆ ಸಮನ್ಸ್ ನೀಡಿತ್ತು. ಶಿವಕುಮಾರ್ ಅವರ ಆಪ್ತ ಸುನಿಲ್ ಕುಮಾರ್ ಶರ್ಮ ಅವರಿಗೆ ಸೇರಿದ ಹೊಸದಿಲ್ಲಿ ಫ್ಲ್ಯಾಟ್‌ನಿಂದ ವಶಪಡಿಸಿಕೊಂಡ 6.68 ಕೋಟಿ ಮೊತ್ತಕ್ಕೆ ಸಂಬಂಧಿಸಿದಂತೆ ಇ.ಡಿ. ಶಿವಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News