ಉಸ್ತುವಾರಿ ಸಚಿವರ ಹೆಸರಿನಲ್ಲಿ ಪಂಗನಾಮ: ವಂಚಕರನ್ನು ಬಂಧಿಸಿದ ಮಡಿಕೇರಿ ಪೊಲೀಸರು

Update: 2019-02-22 17:55 GMT

ಮಡಿಕೇರಿ ಫೆ.22: ರಾಜ್ಯ ಪ್ರವಾಸೋದ್ಯಮ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರ ಹೆಸರು ಹೇಳಿಕೊಂಡು ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ 1.1 ಲಕ್ಷ ರೂ. ವಂಚಿಸಿದ ಆರೋಪಿಗಳನ್ನು 4 ತಿಂಗಳ ಬಳಿಕ ಸೆರೆ ಹಿಡಿಯುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಬ್ಯಾಡರಪೇಟೆ ನಿವಾಸಿ ಸಯ್ಯದ್ ಮುಬಾರಕ್(28) ಮತ್ತು ಸಯ್ಯದ್ ಖಲೀಲ್(28) ಎಂಬವರೇ ಬಂಧಿತ ಆರೋಪಿಗಳು.

ಆರೋಪಿಗಳ ವಿರುದ್ಧ ಬೆಂಗಳೂರಿನ ಕೆ.ಆರ್. ಪುರಂ, ಕೆಂಗೇರಿ, ಕೋರಮಂಗಲ, ಮಡಿವಾಳ, ಜಯನಗರ, ಜಿಗಣಿ, ಮಾಲೂರು ಪೊಲೀಸ್ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಮಡಿಕೇರಿ ವಿಭಾಗದ ಉಪ ಅಧೀಕ್ಷಕ ಸುಂದರ್‍ರಾಜ್ ತಿಳಿಸಿದ್ದಾರೆ. ಮಾತ್ರವಲ್ಲದೇ ಜನರನ್ನು ವಂಚಿಸುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದರೆಂದು ತಿಳಿಸಿದರು. 

ಘಟನೆ ಹಿನ್ನೆಲೆ
ಬೆಂಗಳೂರಿನ ಬನಶಂಕರಿ ನಿವಾಸಿ ಮೂಲತಃ ಮದ್ದೂರು ಗ್ರಾಮದವರಾದ ಶಿವಲಿಂಗಯ್ಯ ಎಂಬುವರು ಕುಶಾಲನಗರದ ಕೂಡ್ಲೂರುವಿನ ಸರ್ವೇ ನಂ.60/2ರಲ್ಲಿ 6.90 ಎಕರೆ ಭೂಮಿ ಹೊಂದಿದ್ದರು. ಈ ಭೂಮಿಯ ಭೂ ಪರಿವರ್ತನೆ ಮಾಡಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಈ ಹಿಂದೆ ಅರ್ಜಿ ಸಲ್ಲಿಸಿದ್ದು, ಕಡತಗಳು ಸಿದ್ದಗೊಂಡಿದ್ದವು. ಈ ಹಿನ್ನೆಲೆಯಲ್ಲಿ ದಾಖಲೆ ಪಡೆದುಕೊಳ್ಳಲು ಶಿವಲಿಂಗಯ್ಯ, ಕಳೆದ ವರ್ಷ ನ.3 ರಂದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಈ ಸಂದರ್ಭ ವ್ಯಕ್ತಿಯೊಬ್ಬ ಎದುರಾಗಿ ನಿಮ್ಮ  ಭೂ ದಾಖಲೆಗಳನ್ನು ನಾನೇ ಸಿದ್ದಪಡಿಸಿರುವುದಾಗಿ ಹೇಳಿ ತನ್ನನ್ನು ‘ಕೇಸ್ ವರ್ಕರ್’ ಗಿರೀಶ್ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಭೂ ಪರಿವರ್ತನೆಗೆ 1 ಲಕ್ಷ ರೂಪಾಯಿ ಶುಲ್ಕ ಪಾವತಿ ಮಾಡಬೇಕಿದ್ದು ಹೆಚ್ಚುವರಿ 1 ಸಾವಿರ ಹಣವನ್ನು ಕಚೇರಿಯ ಇತರ ಸಿಬ್ಬಂದಿಗಳಿಗೆ ನೀಡಬೇಕಿದೆ ಎಂದು ತಿಳಿಸಿದ್ದ.

ಅಲ್ಲದೆ, ಸಚಿವ ಸಾ.ರಾ.ಮಹೇಶ್ ಅವರು ಹೇಳಿದ್ದರಿಂದ ಕಡತಗಳನ್ನು ಬೇಗ ವಿಲೇವಾರಿ ಮಾಡಿರುವುದಾಗಿ ಹೇಳಿದ್ದಲ್ಲದೇ, ತನಗೆ ಸಚಿವರ ಆಪ್ತ ಕಾರ್ಯದರ್ಶಿ ಆತ್ಮೀಯರಾಗಿದ್ದು ಅವರೊಂದಿಗೆ ಮಾತನಾಡಿ ಎಂದು ಮೊಬೈಲನ್ನು ಶಿವಲಿಂಗಯ್ಯ ಅವರಿಗೆ ನೀಡಿದ್ದ. ದೂರವಾಣಿಯಲ್ಲಿ ಮಾತನಾಡಿದ ವ್ಯಕ್ತಿ ತನ್ನನ್ನು ಸಾ.ರಾ. ಮಹೇಶ್ ಅವರ ಆಪ್ತ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ನಿಮ್ಮ ಭೂ ದಾಖಲೆಗಳು ರೆಡಿಯಾಗಿದೆ ಎಂದು ಹೇಳಿ, ಸಚಿವ ಸಾ.ರಾ. ಮಹೇಶ್ ಮಾತನಾಡುತ್ತಾರೆ ಎಂದು ಬೇರೊಬ್ಬನಿಗೆ ಫೋನ್ ನೀಡಿದ್ದ. ಆ ವ್ಯಕ್ತಿ ನಾನು ಸಾರಾ ಮಹೇಶ್ ಎಂದು ಹೇಳಿದ್ದಲ್ಲದೆ, ನಿಮ್ಮ ದಾಖಲೆಗಳು ಸಿದ್ದವಾಗಿದೆ. ಗಿರೀಶನ ಕೈಯಿಂದ ಪಡೆದುಕೊಳ್ಳಿ ಎಂದು ಹೇಳಿ ಕರೆ ಕಟ್ ಮಾಡಿದ್ದ.

ಇದನ್ನು ನಿಜವೆಂದು ನಂಬಿದ ಶಿವಲಿಂಗಯ್ಯ, ಒಟ್ಟು 1.1ಲಕ್ಷ ರೂ.ಗಳನ್ನು ಸಾವಿರ ಹಣವನ್ನು ತೆಗೆದು ಅನಾಮಿಕ ವ್ಯಕ್ತಿಗೆ ನೀಡಿದ್ದರು. ಬ್ಯಾಂಕಿನಿಂದ ಜಿಲ್ಲಾಡಳಿತ ಭವನಕ್ಕೆ ತೆರಳಿದ ಶಿವಲಿಂಗಯ್ಯ ಕೇಸ್ ವರ್ಕರ್(ಅನಾಮಿಕ ವ್ಯಕ್ತಿ)ಗಾಗಿ ಹಲವು ಸಮಯ ಕಾದರೂ ಆ ವ್ಯಕ್ತಿ ಮಾತ್ರ ಬರಲಿಲ್ಲ. ಆತ ನೀಡಿದ ಮೊಬೈಲ್ ಸಂಖೈಗೆ ಕರೆ ಮಾಡಿದ ಸಂದರ್ಭ ಅದು ‘ಸ್ವಿಚ್‍ಆಫ್’ ಆಗಿದೆ ಎಂಬ ಉತ್ತರ ದೊರಕಿತ್ತು. ಆ ಬಳಿಕ ನಡೆದ ಘಟನೆಗಳಿಂದ ಶಿವಲಿಂಗಯ್ಯ ಅವರಿಗೆ ಮೋಸ ಹೋಗಿರುವ ವಿಚಾರ ಅರಿವಾಗಿದ್ದು, ತದನಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. 

ಆರೋಪಿಗಳ ಸೆರೆ
ಪ್ರಕರಣವನ್ನು ಬೆನ್ನು ಹತ್ತಿದ್ದ ಪೊಲೀಸರು ಆರೋಪಿಗಳ ಬಂಧನಕ್ಕೆ ವಿವಿಧ ರೀತಿಯಲ್ಲಿ ಪ್ರಯತ್ನಿಸಿದ್ದರು. ಮಾತ್ರವಲ್ಲದೇ, ಬೆಂಗಳೂರಿನಲ್ಲಿ ಬೀಡು ಬಿಟ್ಟು ಆರೋಪಿಗಳ ಚಲನವಲನ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಆದರೆ ಊರಿನಿಂದ ಊರಿಗೆ ನಿರಂತರವಾಗಿ ಅಲೆಯುವ ಆರೋಪಿಗಳು ಕೂದಲೆಳೆಯ ಅಂತರದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದರು. 

ಆದರೆ ಪ್ರಕರಣವನ್ನು ಜೀವಂತವಾಗಿಟ್ಟಿದ್ದ ನಗರ ಪೊಲೀಸರು, ಆರೋಪಿಗಳ ಮೊಬೈಲ್ ಕರೆಗಳ ಮೇಲೆ ನಿಗಾ ವಹಿಸಿದ್ದರು. ನಿರಂತರ ಪ್ರಯತ್ನದ ಫಲವಾಗಿ ಆರೋಪಿಗಳು ತಮಿಳುನಾಡು ರಾಜ್ಯದ ನೀಲಗಿರಿ ಜಿಲ್ಲೆಯ ಊಟಿಯಲ್ಲಿ ಠಿಕಾಣಿ ಹೂಡಿರುವುದನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತ ಆರೋಪಿಗಳನ್ನು ನ್ಯಾಯಾಲಯದ ವಶಕ್ಕೆ ನೀಡಲಾಗಿದ್ದು, ಘನ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಕಾರ್ಯಾಚರಣೆಯಲ್ಲಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ಷಣ್ಮುಗ, ಸಿಬ್ಬಂದಿಗಳಾದ ಕೆ.ಕೆ. ದಿನೇಶ್, ಮಧುಸೂಧನ್, ಮನೋಜ್, ನಾಗರಾಜ್ ಕಡಗಣ್ಣವರ್, ಸಿಡಿಆರ್ ಸಿಬ್ಬಂದಿಗಳಾದ ಸಿ.ಕೆ.ರಾಜೇಶ್, ಗಿರೀಶ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News