ತರೀಕೆರೆ ರೈಲು ನಿಲ್ದಾಣ ಅಭಿವೃದ್ಧಿಗೆ ಕ್ರಮ: ಶೋಭಾ ಕರಂದ್ಲಾಜೆ

Update: 2019-02-22 18:04 GMT

ತರೀಕೆರೆ, ಫೆ.22: ರೈಲ್ವೆ ಯೋಜನೆಗಳು ದೇಶದ ಅಭಿವೃದ್ಧಿಗೆ ಅತ್ಯಗತ್ಯ. ಕೇಂದ್ರ ಸರಕಾರ ರೈಲ್ವೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದೆ. ಈ ಬಾರಿಯ ಕೇಂದ್ರದ ರೈಲ್ವೆ ಬಜೆಟ್‌ನಲ್ಲಿ ಜಿಲ್ಲೆಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಪಟ್ಟಣದಲ್ಲಿರುವ ರೈಲು ನಿಲ್ದಾಣ ಬ್ರಿಟಿಷರ ಕಾಲದ ರೈಲು ನಿಲ್ದಾಣವಾದ್ದರಿಂದ ಈ ನಿಲ್ದಾಣವನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುವುದೆಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

ಶುಕ್ರವಾರ ಪಟ್ಟಣದ ರೈಲ್ವೆ ನಿಲ್ದಾಣದ ರೈಲ್ವೆಪ್ಲಾಟ್ ಫಾರಂ.1ರ ಮೇಲ್ದರ್ಜೆಗೇರಿಸುವ ಹಾಗೂ ಪಾಟ್‌ಫಾರಂ.2ನ್ನು ಎತ್ತರ ಪಡಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಮತ್ತು ಮೇಲ್ಚಾವಣಿ, ಶೌಚಾಲಯ ನಿರ್ಮಿಸುವ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಲೆನಾಡಿನ ಹೆಬ್ಬಾಗಿಲಾದ ತರೀಕೆರೆಯ ರೈಲು ನಿಲ್ದಾಣವನ್ನು ರಾಜ್ಯದ ಬೇರೆ ಬೇರೆ ಭಾಗಕ್ಕಿಂತ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ಕೇಂದ್ರದ ರೈಲ್ವೆ ಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಶಾಸಕ ಡಿ.ಎಸ್.ಸುರೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ತಾಪಂ ಅಧ್ಯಕ್ಷೆ ಪದ್ಮಾವತಿ, ಪುರಸಭೆ ಅಧ್ಯಕ್ಷೆ ಯಶೋಧಮ್ಮ, ಮೈಸೂರು ವಿಭಾಗದ ಡಿಎಂಒ ಸೇರಿದಂತೆ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಂಸದೆ ವಿರುದ್ಧ ಸಾರ್ವಜನಿಕರ ಆಕ್ರೋಶ

ಶುಕ್ರವಾರ ತರೀಕೆರೆ ರೈಲು ನಿಲ್ದಾಣದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಕಾರನ್ನು ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದರು.

ಸಂಸದೆ ಶೋಭಾ ಜಿಲ್ಲೆಗೆ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡುವಲ್ಲಿ ವಿಫಲರಾಗಿದ್ದಾರೆ. ಸಂಸದರಾಗಿ 5 ವರ್ಷಗಳಲ್ಲಿ ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ. ಸಂಸದರಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆ, ಜಿಲ್ಲೆಯ ತರೀಕೆರೆ, ಕಡೂರು ತಾಲೂಕುಗಳ ವ್ಯಾಪ್ತಿಯಲ್ಲಿ ಬರಗಾಲವಿದ್ದರೂ ಈ ಬಗ್ಗೆ ಸಂಸದೆ ಶೋಭಾ ಯಾವುದೇ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರಕಾರದೊಂದಿಗೆ ಚರ್ಚಿಸಿಲ್ಲ. ಜಿಲ್ಲೆಯ ಜ್ವಲಂತ ಸಮಸ್ಯೆ ಸಮಸ್ಯೆಗಳಿಗೂ ಅವರು ಸ್ಪಂದಿಸಿಲ್ಲ. ಸದ್ಯ ಸಂಸತ್ ಚುನಾವಣೆ ಸಮೀಪಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಓಡಾಟ ಆರಂಭಿಸಿದ್ದಾರೆ. ಇಂತಹ ಸಂಸದೆ ಜಿಲ್ಲೆಗೆ ಆವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಕೆಲ ಹೊತ್ತು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ನಂತರ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News