ಮಡಿಕೇರಿ: ವಲಸೆ ಕಾರ್ಮಿಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Update: 2019-02-22 18:28 GMT

ಮಡಿಕೇರಿ, ಫೆ.22 : ಕೊಡಗಿನ ಶಾಂತಿಗೆ ಭಂಗ ಉಂಟು ಮಾಡುತ್ತಿರುವ ಹೊರ ರಾಜ್ಯದ ಕಾರ್ಮಿಕರನ್ನು ಗಡಿಪಾರು ಮಾಡಬೇಕು ಮತ್ತು ಇತ್ತೀಚೆಗೆ ಸಿದ್ದಾಪುರದಲ್ಲಿ ಪ.ಬಂಗಾಳದ ಕಾರ್ಮಿಕರಿಂದ ನಡೆದ ವಿದ್ಯಾರ್ಥಿನಿ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಧನ ನೀಡಬೇಕೆಂದು ಆಗ್ರಹಿಸಿ ಬಹುಜನ ಕಾರ್ಮಿಕ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಇಂದಿರಾಗಾಂಧಿ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಬಹುಜನ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಕೆ.ಮೊಣ್ಣಪ್ಪ, ಪ್ರಸ್ತುತ ಕೊಡಗು ಜಿಲ್ಲೆಯ ಎಸ್ಟೇಟ್‍ಗಳಲ್ಲಿ ಕೆಲಸದ ನೆಪದಲ್ಲಿ ನೆಲೆಸಿರುವ ಹೊರ ರಾಜ್ಯದ ಕಾರ್ಮಿಕರಿಂದ ಕೊಲೆ, ಸುಲಿಗೆಯಂತಹ ದುಷ್ಕೃತ್ಯಗಳು ನಡೆಯುವ ಮೂಲಕ ಇಲ್ಲಿನ ಶಾಂತಿಗೆ ಭಂಗ ಉಂಟಾಗುತ್ತಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದರೂ ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು.

ಕಳೆದ ಎರಡು, ಮೂರು ವರ್ಷಗಳಿಂದ ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ಬಾಂಗ್ಲಾದೇಶದ ಕಾರ್ಮಿಕರು ಕೊಡಗು ಜಿಲ್ಲೆಗೆ ದೊಡ್ಡ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ. ಕಡಿಮೆ ಕೂಲಿಗೆ ಕಾರ್ಮಿಕರು ದೊರಕುತ್ತಾರೆ ಎನ್ನುವ ಒಂದೇ ಕಾರಣಕ್ಕೆ ಕಾಫಿ ತೋಟದ ಮಾಲಕರು ಇವರಿಗೆ ತಮ್ಮ ಲೈನ್ ಮನೆಗಳಲ್ಲಿ ವಾಸ ಮಾಡಲು ಅವಕಾಶವನ್ನು ಒದಗಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ವೀರಾಜಪೇಟೆ ತಾಲೂಕಿನಲ್ಲಿ ನಡೆದ ಶಫೀಕ್ ಎಂಬಾತನ ಹತ್ಯಾ ಪ್ರಕರಣದಲ್ಲೂ ಅಸ್ಸಾಂ ವ್ಯಕ್ತಿಯೊಬ್ಬ ಭಾಗಿಯಾಗಿರುವುದು ಗಮನಾರ್ಹವೆಂದು ಮೊಣ್ಣಪ್ಪ ಹೇಳಿದರು.

ಸಿದ್ದಾಪುರದಲ್ಲಿ ವಿದ್ಯಾರ್ಥಿನಿಯನ್ನು ಅಮಾನುಷವಾಗಿ ಹತ್ಯೆಗೈದಿರುವ ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಆಗ್ರಹಿಸಿದ ಅವರು, ವಿದ್ಯಾರ್ಥಿನಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.

ಬೇಡಿಕೆಗಳು
ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಆರೋಪಿಗಳನ್ನು ಗಲ್ಲಿಗೇರಿಸಬೇಕು, ವಿದ್ಯಾರ್ಥಿನಿಯ ಕುಟುಂಬದ ಒಬ್ಬ ವ್ಯಕ್ತಿಗೆ ಸರ್ಕಾರಿ ನೌಕರಿಯನ್ನು ನೀಡಬೇಕು ಮತ್ತು ಸೂಕ್ತ ಪರಿಹಾರಗಳೊಂದಿಗೆ ಅವಳ ಕುಟುಂಬದ ರಕ್ಷಣೆಯಾಗಬೇಕು, ಹೊರ ರಾಜ್ಯದಿಂದ ಬಂದಿರುವ ಕಾರ್ಮಿಕರ ಸೂಕ್ತ ದಾಖಲಾತಿಗಳನ್ನು ಪರಿಶೀಲಿಸಬೇಕು ಮತ್ತು ಅವರಿಗೆ ನಕಲಿ ದಾಖಲಾತಿಗಳನ್ನು ತಯಾರಿಸಿದ ಹಾಗೂ ಪಡೆದುಕೊಂಡ ಇಬ್ಬರ ಮೇಲೂ ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲು ಸೇರಿಸಬೇಕು, ಕೊಡಗಿನ ಮೂಲ ಕಾರ್ಮಿಕರಿಗೆ ಮುಖುವಾಗಿರುವ ಅಸ್ಸಾಂ ಹಾಗೂ ಬಾಂಗ್ಲಾ ಹೊರರಾಜ್ಯದ ಕಾರ್ಮಿಕರನ್ನು ತಕ್ಷಣ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಹುಜನ ಕಾರ್ಮಿಕರ ಸಂಘದ ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಹೊದ್ದೂರು ಗ್ರಾ.ಪಂ ಉಪಾಧ್ಯಕ್ಷರಾದ ಪಿ.ಎ.ಕುಸುಮ, ಪಾಲೆಮಾಡಿನ ಮಾಯಾದೇವಿ ಮಹಿಳಾ ಸಂಘದ ಹೆಚ್.ಯು.ಉಷಾ, ಪಿ.ಜಿ. ಗೀತಾ, ಸಿಪಿಐಎಮ್‍ಎಲ್ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷರಾದ ಚೆನ್ನಪ್ಪ, ಕೊಡಗು ದಲಿತ ಹಿತ ರಕ್ಷಣ ಸಮಿತಿಯ ಅಧ್ಯಕ್ಷರಾದ ಗಣೇಶ್, ಹೊದ್ದೂರು ಅಂಬೇಡ್ಕರ್ ಕಾಲೋನಿಯ ಅಧ್ಯಕ್ಷರಾದ ತಾಯಮ್ಮ, ಪಾಲೇಮಾಡಿನ ಭೀಮ ಸೇನೆಯ ಎಂ.ಎಸ್.ಗೋವಿಂದ ಹಾಗೂ ಪಿ.ಜಿ. ಸಿದ್ದು ಹಾಗೂ ಹೊದ್ದೂರು ಗ್ರಾಮದ ಎಲ್ಲಾ ಸ್ತ್ರೀ ಶಕ್ತಿ ಮತ್ತು ಮಹಿಳಾ ಸಂಘಟನೆಗಳ ಸದಸ್ಯರುಗಳು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News