ಚಿಕ್ಕಮಗಳೂರು: ಜಿಲ್ಲಾಧಿಕಾರಿ ವರ್ಗಾವಣೆ ಆದೇಶ ರದ್ದತಿಗೆ ಒತ್ತಾಯಿಸಿ ಧರಣಿ

Update: 2019-02-23 12:15 GMT

ಚಿಕ್ಕಮಗಳೂರು, ಫೆ.23: ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿ ಜಿಲ್ಲೆಯ ಹಿತದೃಷ್ಟಿಯಿಂದ ಇಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸಿ ನಗರದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಶನಿವಾರ ನಗರದಲ್ಲಿ ಧರಣಿ ನಡೆಸಿದರು.

ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ಜಿಲ್ಲಾ ಸೌಹಾರ್ದ ಸಹೋದರತ್ವ ಸಮಿತಿ, ರೈತ ಸಂಘ, ಜಿಲ್ಲಾಕನ್ನಡ ಸೇನೆ, ನವ ಕರ್ನಾಟಕಯುವ ಶಕ್ತಿ, ಮಹರ್ಷಿ ವಾಲ್ಮಿಕಿ ಸಂಘ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಕರುನಾಡ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ಜಿಲ್ಲಾ ವೀರಶೈವ ಮಹಾಸಭಾ ಯುವಘಟಕ, ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ, ದೇವಾಂಗ ಸಮಾಜ, ಕ್ರೈಸ್ತರಕ್ಷಣಾ ವೇದಿಕೆ, ಸವಿತಾ ಸಮಾಜ, ನವೋದಯ ಯುವಕ ಸಂಘ, ಹಿರೇಮಗಳೂರಿನ ಹೊಯ್ಸಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಸೇರಿದಂತೆ ಅನೇಕ ಸಂಘಟನೆಗಳ ಸಮಾನ ಮನಸ್ಕರು ಪಾಲ್ಗೊಂಡು ಜಿಲ್ಲಾಧಿಕಾರಿಗಳ ವರ್ಗಾವಣೆ ಆದೇಶ ರದ್ದುಗೊಳಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸೌಹಾರ್ದ ಸಹೋದರತ್ವ ಸಮಿತಿ ಅಧ್ಯಕ್ಷಕೆ.ಟಿ.ರಾಧಕೃಷ್ಣ ಮಾತನಾಡಿ, ಐಎಎಸ್, ಐಪಿಎಸ್ ಅಧಿಕಾರಿಗಳು, ಜನಪರವಾಗಿ, ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು, ಕಾಣದ ಕೈಗಳು ಆ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುತ್ತವೆ. ವಿಶೇಷವಾಗಿ ನಮ್ಮ ಜಿಲ್ಲೆಗಳಲ್ಲಿ ಅಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಅದರಿಂದಾಗಿ ಜಿಲ್ಲೆಯ ಜನರು ತೊಂದರೆ ಅನುಭವಿಸುವುದರ ಜೊತೆಗೆ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು.

ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಗುರುಶಾಂತಪ್ಪ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಜನಪರವಾಗಿ ಕೆಲಸ ಮಾಡುತ್ತಿದ್ದ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರ ವರ್ಗಾವಣೆ ಜಿಲ್ಲೆಯ ಜನರಿಗೆ ನೋವು ತಂದಿದೆ. ಅವರು ಇಲ್ಲಿಗೆ ಜಿಲ್ಲಾಧಿಕಾರಿಗಳಾಗಿ ಬಂದ ನಂತರ ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ. ಜನ ನೆಮ್ಮದಿಯಿಂದಇದ್ದಾರೆ. ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಕೋಮುವಾದಿಗಳ ಚಟುವಟಿಕೆಗಳ ಕೈ ಮೇಲಾಗದಂತೆ ಮಾಡಿದ್ದಾರೆ. ದತ್ತಜಯಂತಿ ಶಾಂತಿಯುತವಾಗಿ ನಡೆಯಲು ಕಾರಣಕರ್ತರಾಗಿದ್ದಾರೆ. ಬಡವರು, ಕೂಲಿ ಕಾರ್ಮಿಕರು ಸೇರಿದಂತೆಎಲ್ಲ ವರ್ಗದಜನರ ಪರವಾಗಿ  ಕೆಲಸ ಮಾಡುತ್ತಿರುವ ಶ್ರೀರಂಗಯ್ಯ ಎಲ್ಲ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ವರ್ಗಾವಣೆಯನ್ನು ಖಂಡಿಸುವುದಾಗಿ ಹೇಳಿದರು.

ಎಪಿಎಂಸಿ ಅಧ್ಯಕ್ಷ ಅರೇನಹಳ್ಳಿ ಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರ ವರ್ಗಾವಣೆಯಿಂದ ಜನರು ಒಂದು ರೀತಿಯಲ್ಲಿ ನೋವು ಅನುಭವಿಸುತ್ತಿದ್ದಾರೆ. ಅವರ ವರ್ಗಾವಣೆಯನ್ನು ರದ್ದುಗೊಳಿಸಿ ಇಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಮರ್ಲೆ ಅಣ್ಣಯ್ಯ ಮಾತನಾಡಿ, ಈ ರೀತಿ ಅಧಿಕಾರಿಗಳನ್ನು ಅವಧಿಗೆ ಮುನ್ನ ವರ್ಗಾವಣೆ ಮಾಡುವುದರಿಂದ ಹೊಸದಾಗಿ ಬರುವ ಅಧಿಕಾರಿಗಳು ಜಿಲ್ಲೆಯ ಆಗುಹೋಗುಗಳನ್ನು ತಿಳಿದುಕೊಂಡು ಕೆಲಸ ಮಾಡುವುದು ಕಷ್ಟವಾಗುತ್ತದೆ. ಶ್ರೀರಂಗಯ್ಯ ಜಿಲ್ಲೆಯ ಸಮಸ್ಯೆಗಳನ್ನು ಅರಿತು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ವರ್ಗಾವಣೆ ಸರಿಯಲ್ಲ ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳನ್ನು ಈ ರೀತಿ ನಿಯಮ ಮೀರಿ ವರ್ಗಾವಣೆ ಮಾಡುವುದರಿಂದ ಅಧಿಕಾರಿಗಳ ಆತ್ಮಸ್ಥೈರ್ಯ ಕುಂದುತ್ತದೆ. ಜನಪರವಾಗಿ ಕೆಲಸ ಮಾಡುವ ಆಸಕ್ತಿ ಅವರಿಂದ ದೂರಾಗುತ್ತದೆ. ಇಲ್ಲಿನ ಜಿಲ್ಲಾಧಿಕಾರಿ ಶ್ರೀರಂಗಯ್ಯ ವಿರುದ್ಧ ಯಾವುದೇ ದೂರುಗಳು, ಟೀಕೆಗಳು, ಆರೋಪಗಳು ಇಲ್ಲದಿದ್ದರೂ ಚುನಾವಣೆ ನೆಪವಾಗಿಸಿಕೊಂಡು ವರ್ಗಾವಣೆ ಸರಿಯಲ್ಲ. ವರ್ಗಾವಣೆ ರದ್ದುಗೊಳಿಸಿ ಇಲಿಯೇ ಮುಂದುವರಿಯಲು ಅವಕಾಶ ಮಾಡಿಕೊಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.

ಮಹರ್ಷಿ ವಾಲ್ಮಿಕ ಸಂಘ ಅಧ್ಯಕ್ಷ ಜಗದೀಶ್ ಕೋಟೆ, ಜಿಲ್ಲಾ ವೀರಶೈವ ಮಹಾಸಭಾ ಯುವಘಟಕದ ಅಧ್ಯಕ್ಷ ಜಿ.ಬಿ.ಪವನ್, ದೇವಾಂಗ ಸಮಾಜ ಮುಖಂಡ ಹಾಗೂ ವಕೀಲ ಪ್ರಶಾಂತ್ ಮಾತನಾಡಿದರು. ರಾಜ್ಯಕುರಿ ಮತ್ತು ಉಣ್ಣೆ ಮಂಡಳಿ ಮಾಜಿ ನಿರ್ದೇಶಕ ಕೋಟೆ ಆನಂದ್, ಜಿಲ್ಲಾಕನ್ನಡ ಸೇನೆ ಮುಖಂಡರಾದ ಜಯಪ್ರಕಾಶ್, ತಿಮ್ಮಪ್ಪ, ಹೇಮಂತ, ಸವಿತಾ ಸಮಾಜ ತಾಲೂಕು ಅಧ್ಯಕ್ಷ ವೆಂಕಟೇಶ್, ಗ್ರಾಮ ಪಂಚಾಯತ್ ಸದಸ್ಯ ನಾಗೇಶ್, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಬೆನಡಿಕ್ಟ್ ಜೇಮ್ಸ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ ಖಜಾಂಚಿ ಎಚ್.ಎಸ್.ಜಗದೀಶ್, ಜಿಲ್ಲಾ ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಹರೀಶ್, ದಲಿತ ಸಂಘರ್ಷ ಸಮಿತಿ ಮುಖಂಡರಾದ ಜಿ.ಕೆ.ಬಸವರಾಜ್, ಲೋಕೇಶ್, ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ ಅಧ್ಯಕ್ಷ ಸೂರಿ ಪ್ರಭು, ಕ್ರೈಸ್ತರಕ್ಷಣಾ ವೇದಿಕೆ ಅಧ್ಯಕ್ಷ ಸಗಾಯ್‍ ದಾಸ್, ನವೋದಯಯುವಕ ಸಂಘ ಅಧ್ಯಕ್ಷ ಚಿರಂತ್‍ ಕುಮಾರ್, ಹಿರೇಮಗಳೂರಿನ ಹೊಯ್ಸಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಅಧ್ಯಕ್ಷ ರಾಜಶೇಖರ್, ಸಿಡಿಎ ಮಾಜಿ ಸದಸ್ಯ ಮಂಜುನಾಥ್, ವಿವಿಧ ಸಂಘಟನೆಗಳ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಪಿ.ವಿ.ಥಂಬನ್, ಎಸ್.ಟಿ.ಸೋಮಶೇಖರ್, ಜೆ.ವಿನಾಯಕ್, ಕೋಟೆ ಚಿದಾನಂದ್ ಸೇರಿದಂತೆ ಅನೇಕ ಸಂಘಟನೆಗಳ ಸಮಾನ ಮನಸ್ಕರು ಭಾಗವಹಿಸಿದ್ದರು.

ಧರಣಿ ನಂತರ ಎಲ್ಲರೂ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ವ್ಯವಸ್ಥಾಪಕ ರಂಗಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಸರಕಾರಕ್ಕೆ ಕಳಿಸಿಕೊಡುವಂತೆ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News