ರಾಜ್ಯದಲ್ಲಿ 3 ಸಾವಿರಕ್ಕೂ ಅಧಿಕ ಕುಟುಂಬ ಜೀತಪದ್ಧತಿಗೆ ಬಲಿ: ಕಿರಣ ಕಮಲ ಪ್ರಸಾದ್

Update: 2019-02-23 14:25 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.23: ರಾಜ್ಯದಲ್ಲಿ 3 ಸಾವಿರಕ್ಕೂ ಅಧಿಕ ಕುಟುಂಬಗಳು ಜೀತಪದ್ದತಿಗೆ ಬಲಿಯಾಗಿವೆ ಎಂದು ಜೀತವಿಮುಕ್ತಿ ಕರ್ನಾಟಕ ಸಂಚಾಲಕ ಕಿರಣ ಕಮಲ ಪ್ರಸಾದ್ ಕಳವಳಕಾರಿ ಅಂಶವನ್ನು ತಿಳಿದ್ದಾರೆ.

ಶನಿವಾರ ನಗರದ ಶಾಸಕರ ಭವನದಲ್ಲಿ ಜೀತವಿಮುಕ್ತಿ ಕರ್ನಾಟಕ ಆಯೋಜಿಸಿದ್ದ ಬಿಟ್ಟಿ ಚಾಕ್ರಿ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ 15 ಜಿಲ್ಲೆಗಳ 964 ಹಳ್ಳಿಗಳಲ್ಲಿ 3,387 ಬಿಟ್ಟಿ ಚಾಕ್ರಿ ಮಾಡುವ ಕುಟುಂಬಗಳನ್ನು ಗುರುತಿಸಲಾಗಿದ್ದು, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲೂ ಸಾವಿರಾರು ದಲಿತ ಕುಟುಂಬಗಳು ಜೀತಪದ್ದತಿಯಡಿ ಕೆಲಸ ಮಾಡುತ್ತಿದ್ದಾರೆಂದು ಅಂದಾಜಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬೀದರ್‌ನಲ್ಲಿ ಅತಿ ಹೆಚ್ಚು ಹಾಗೂ ದಾವಣಗೆರೆಯಲ್ಲಿ ಅತಿ ಕಡಿಮೆ ದಲಿತ ಕುಟುಂಬಗಳನ್ನು ಗುರುತಿಸಲಾಗಿದ್ದು, ಉಳಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಿಟ್ಟಿ ಚಾಕ್ರಿ ಇಂದಿಗೂ ಬಳಕೆಯಲ್ಲಿದೆ. ಅಲ್ಲದೆ, 1976ರಲ್ಲೇ ಜೀತ ಪದ್ದತಿ ನಿರ್ಮೂಲನಾ ಕಾಯ್ದೆ ಜಾರಿಗೆ ಬಂದಿದ್ದರೂ ಕಾನೂನು ಅನುಷ್ಠಾನ ಸಂಪೂರ್ಣವಾಗಿ ಆಗಿಲ್ಲ. ಈ ನಿಟ್ಟಿನಲ್ಲಿ ಸರಕಾರ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.

ಜೀತಪದ್ದತಿ ಮಾಡುತ್ತಿರುವ ಪ್ರತಿ ಕುಟುಂಬಕ್ಕೆ 5 ಎಕರೆ ಜಮೀನು ಒದಗಿಸುವುದರೊಂದಿಗೆ ವ್ಯವಸಾಯಕ್ಕೆ ಅಗತ್ಯವಿರುವ ಸೌಲಭ್ಯ ಮತ್ತು ಪರಿಕರಗಳನ್ನು ಒದಗಿಸಬೇಕು. ಸ್ವಉದ್ಯೋಗ, ವಸತಿ ನಿರ್ಮಾಣಕ್ಕೆ ಸಹಾಯ ಹಾಗೂ ಅವರ ಮಕ್ಕಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಸತಿ ಶಾಲೆಗಳಲ್ಲಿ ಶಿಕ್ಷಣ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಜೀತ ಪದ್ದತಿಯಿಂದ ನೊಂದ ಸಮುದಾಯದವರಿಗೆ ಸೂಕ್ತ ರೀತಿಯ ಪ್ರಜ್ಞೆಯನ್ನು ಮೂಡಿಸುವ ಮೂಲಕ ಅನುಸೂಚಿತ ಜಾತಿ ಮುಖಂಡರು, ಜನನಾಯಕರು, ವಿಚಾರವಂತರು, ಶಿಕ್ಷಿತರು, ಸಮಾಜದ ಸಮಸ್ತ ನಾಯಕರು ಜೀತಪದ್ಧತಿ ಕುರಿತಂತೆ ಕ್ರಿಯಾಶೀಲರಾಗಬೇಕೆಂದು ಅವರು ಮನವಿ ಮಾಡಿದರು.

ಬೇಡಿಕೆಗಳು

* ಜೀತಪದ್ದತಿ ಬೆಳಕಿಗೆ ಬರಬೇಕು.

* ನರೇಗಾ ಯೋಜನೆಯಡಿ 200 ದಿನಗಳ ಉದ್ಯೋಗ ಖಾತರಿಗೊಳಿಸಬೇಕು.

* ಜೀತಪದ್ದತಿಗೆ ಒಳಗಾದ ಮಕ್ಕಳಿಗೆ ಶಿಕ್ಷಣ ಕಲ್ಪಿಸಬೇಕು.

* ಸಮಾಜ ಕಲ್ಯಾಣ ಇಲಾಖೆಯಿಂದ ವಿಶಷ್ಟ ಯೋಜನೆ ರೂಪಿಸಬೇಕು.

* ಪ್ರತಿ ಕುಟುಂಬಕ್ಕೆ 5 ಎಕರೆ ಜಮೀನು ಒದಗಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News