ಸಾಮಾಜಿಕ ಜಾಲತಾಣಗಳಲ್ಲಿ 'ಗೋಬ್ಯಾಕ್ ಶೋಭಾ' ಚಳವಳಿ: ಸಂಸದೆ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ

Update: 2019-02-23 15:41 GMT

ಚಿಕ್ಕಮಗಳೂರು, ಫೆ.23: ಲೋಕಾಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಹಾಲಿ ಸಂಸದೆ ಬಿಜೆಪಿ ಪಕ್ಷದ ಶೋಭಾ ಕರಂದ್ಲಾಜೆ ಅವರನ್ನೇ ಕಣಕ್ಕಿಳಿಯುತ್ತಾರೋ ಇಲ್ಲವೋ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಸಂಸದೆ ಶೋಭಾ ಅವರು ಮಾತ್ರ ಎರಡೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. 

ಸಂಸದೆಯಾದ ಬಳಿಕ ಎರಡೂ ಜಿಲ್ಲೆಗಳಿಂದ ನಾಪತ್ತೆಯಾಗಿದ್ದರೆಂಬ ಆರೋಪ ಹೊತ್ತಿರುವ ಶೋಭಾ ಅವರು ಚುನಾವಣೆ ಸಂದರ್ಭ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಸಾರ್ವಜನಿಕರು ಕೆಲವೆಡೆ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಸಂಸದೆ ಶೋಭಾ ಅವರ ದಿಢೀರ್ ಪ್ರವಾಸ ಕಾರ್ಯಕ್ರಮಗಳು, ಸರಕಾರಿ ಕಾರ್ಯಕ್ರಮಗಳ ಬಗ್ಗೆ ಸ್ವಪಕ್ಷೀಯ ಕಾರ್ಯಕರ್ತರು, ಮುಖಂಡರಿಂದಲೇ ಟೀಕೆಗಳು ಕೇಳಿ ಬರುತ್ತಿದೆ. ಗೋ ಬ್ಯಾಕ್ ಶೋಭ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಚಳವಳಿಗೆ ನಾಂದಿ ಹಾಡಿರುವವರು ಬಿಜೆಪಿ ಕಾರ್ಯಕರ್ತರೆಂಬುದು ವಿಶೇಷವಾಗಿದೆ.

ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಮತ್ತೆ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆಂಬ ಮಾತು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಶೋಭಾ ಕರಂದ್ಲಾಜೆ ಅವರು ಇತ್ತೀಚೆಗೆ ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. 

ಸಂಸದೆ ಶೋಭಾ ಅವರು ಎಂಪಿ ಆದ ಬಳಿಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಬೆಂಗಳೂರು ಮತ್ತು ಹೊಸದಿಲ್ಲಿಗೆ ಅವರ ರಾಜಕೀಯ ಸೀಮಿತವಾಗಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿವೃಷ್ಟಿಯಾದಾಗಲೂ ಅವರು ಇತ್ತ ಎಡತಾಕಿದ್ದು ವಿರಳ. ಅಲ್ಲದೇ ಸಂಸದರಾದ ಬಳಿಕ ಅವರು ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲೂ ವಿಫಲರಾಗಿದ್ದಾರೆಂಬ ಆರೋಪ ಸಾರ್ವತ್ರಿಕವಾಗಿ ಕೇಳಿ ಬಂದಿತ್ತು. ಈ ಕಾರಣಕ್ಕೆ ಜಿಲ್ಲೆಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಜನಾಕ್ರೋಶ ತೀವ್ರವಾಗಿದೆ. ಬಿಜೆಪಿ ಪಕ್ಷದ ಮುಖಂಡರು ಮತ್ತೆ ಅವರನ್ನು ಇದೇ ಲೋಕಾಸಭೆ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಸದರೆ ಬಿಜೆಪಿ ಕೈಸುಟ್ಟುಕೊಳ್ಳುವುದು ನಿಶ್ಚಿತ ಎಂಬ ಮಾತು ಜಿಲ್ಲೆಯ ಬಿಜೆಪಿ ಪಕ್ಷದ ವಲಯದಲ್ಲೇ ಕೇಳಿ ಬರುವ ಮಾತಾಗಿದ್ದು, ಕಳೆದ ಶುಕ್ರವಾರ ತರೀಕೆರೆ ಪಟ್ಟಣಕ್ಕೆ ಆಗಮಿಸಿದ್ದ ಅವರ ವಿರುದ್ಧ ಸಾರ್ವಜನಿಕರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದರು. ಎರಡೂ ಜಿಲ್ಲೆಗಳಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ವಿವಿಧ ಕಾರಣಗಳಿಂದಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರ ವಿರೋಧ ಕಟ್ಟಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜಗಜ್ಜಾಹೀರಾಗುತ್ತಿದ್ದು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಸಂಘಪರಿವಾರ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಶೋಭ ಗೋಬ್ಯಾಕ್ ಎಂಬ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಹರಿಯ ಬಿಟ್ಟಿದ್ದಾರೆ. ಈ ಪೋಸ್ಟ್ ಅನ್ನು ಸಾವಿರಾರು ಮಂದಿ ಲೈಕ್, ಶೇರ್ ಮಾಡುತ್ತಿರುವುದಲ್ಲದೇ ಸಂಸದೆ ಕರಂದ್ಲಾಜೆ ಅವರನ್ನು ಗೋ ಬ್ಯಾಕ್ ಎಂದು ಹೇಳಲು ಕಮೆಂಟ್‍ಗಳ ರೂಪದಲ್ಲಿ ಕಾರಣಗಳನ್ನೂ ವ್ಯಾಪಕವಾಗಿ ಹಾಕಲಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರೇ ಆರಂಭಿಸಿರುವ ಗೋಬ್ಯಾಕ್ ಶೋಭ ಪೋಸ್ಟ್ ಅಭಿಯಾನ ಇದೀಗ ಸಾಮಾಜಿಕ ಜಾಲತಾಣಗಲ್ಲಿ ನಿಧಾನವಾಗಿ ಚಳವಳಿಯ ರೂಪ ಪಡೆದುಕೊಳ್ಳುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News