ಬಂಡೀಪುರ ಅಭಯಾರಣ್ಯದಲ್ಲಿ ಭಾರೀ ಬೆಂಕಿ: 15 ಸಾವಿರ ಎಕರೆ ಅರಣ್ಯ ಪ್ರದೇಶ ಭಸ್ಮ

Update: 2019-02-23 16:13 GMT

ಚಾಮರಾಜನಗರ, ಫೆ.23: ವಿಶ್ವದಲ್ಲೇ ಅತೀ ಹೆಚ್ಚು ಹುಲಿಗಳಿರುವ ಹಾಗೂ ಅಪರೂಪದ ಪ್ರಾಣಿಪಕ್ಷಿಗಳ ಸಂರಕ್ಷಿತ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯದಲ್ಲಿ ಬೆಂಕಿ ವ್ಯಾಪಿಸಿದ್ದು, ಹದಿನೈದು ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಭಸ್ಮವಾಗಿದೆ ಎಂದು ಹೇಳಲಾಗಿದೆ. 

ಒಂದು ವಾರದಿಂದ ಅರಣ್ಯದ ಕೆಲವೆಡೆ ಬೆಂಕಿ ಕಾಣಿಸಿಕೊಂಡು ಇದೀಗ ಇಡೀ ಬಂಡೀಪುರ ಉದ್ಯಾನವನಕ್ಕೆ ಬೆಂಕಿ ಆವರಿಸಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿರುವ ಅರಣ್ಯಾಧಿಕಾರಿಗಳು ಕಾಡಿಗೆ ಬೆಂಕಿ ಹಾಕಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಹುಲಿ ಸಂರಕ್ಷಿತ ಅರಣ್ಯವಾಗಿರುವ ಬಂಡೀಪುರ ಅಭಯಾರಣ್ಯ ವಿಶ್ವದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಬಂಡೀಪುರದ ಕುಂದಕೆರೆಯಲ್ಲಿ ಮೂರು ದಿನದ ಹಿಂದೆ ಬೆಂಕಿಗೆ ಸ್ವಲ್ಪ ಪ್ರಮಾಣದಲ್ಲಿ ಅರಣ್ಯ ನಾಶವಾಗಿತ್ತು. ಆದರೆ ಶುಕ್ರವಾರ ಬಂಡೀಪುರ ಸುತ್ತಮುತ್ತಲಿನ ಕುಂದಕೆರೆ, ಲೊಕ್ಕೇರೆ, ಚಿಕ್ಕೆಲಚಟ್ಟಿ, ಕಲ್ಲಿಗೌಡನಹಳ್ಳಿ , ಶಿವಪುರ ಗೋಪಾಲಸ್ವಾಮಿಬೆಟ್ಟ ಸೇರಿದಂತೆ ಹಲವು ಕಡೆ ಬೆಂಕಿ ಕಾಣಿಸಿಕೊಂಡಿದ್ದು ಸುಮಾರು 15,000 ಎಕರೆ ನಾಶವಾಗಿದೆ ಎನ್ನಲಾಗಿದೆ.

ಶನಿವಾರ ಮುಂಜಾನೆ ಬೀಸಿದ ಬಿರುಗಾಳಿಗೆ ಬೆಂಕಿ ಇಡೀ ಬಂಡೀಪುರವನ್ನೇ ವ್ಯಾಪಿಸಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮಳೆಯಾದ್ದರಿಂದ ಅರಣ್ಯದಲ್ಲಿ ಲಾಂಟಾನಾ ಹಾಗೂ ಹುಲ್ಲು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿತ್ತು. ಈಗಾಗಲೆ ಬಿಸಿಲಿಗೆ ಅರಣ್ಯ ಸಂಪೂರ್ಣ ಒಣಗಿತ್ತು. ಇದೀಗ ಬೆಂಕಿಯ ಕೆನ್ನಾಲಿಗೆಗೆ ಇಡೀ ಅರಣ್ಯ ನಾಶವಾಗುವತ್ತಾ ಸಾಗಿದೆ. ಬಂಡೀಪುರ ಅರಣ್ಯಕ್ಕೆ ಬಿದ್ದ ಬೆಂಕಿ ಆರಿಸಲು ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಸತತ ಪ್ರಯತ್ನ ನಡೆಸುತ್ತಿದ್ದರೂ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನಲಾಗಿದೆ. 

ಎರಡು ವರ್ಷದ ಹಿಂದೆಯೂ ಬೆಂಕಿ ಕಳೆದೆರಡು ವರ್ಷದ ಹಿಂದೆ ಬಂಡೀಪುರದ ಕಲ್ಕೆರೆ ಅರಣ್ಯ ವಲಯದಲ್ಲಿ ಬೆಂಕಿ ಬಿದ್ದು 15 ಸಾವಿರ ಎಕರೆ ಅರಣ್ಯ ಭಸ್ಮವಾಗಿತ್ತು. ಅಲ್ಲದೆ ಅರಣ್ಯ ರಕ್ಷಕ ಮುರುಗಪ್ಪತಮ್ಮನಗೊಳ್ ಎಂಬವರು ಸಜೀವ ದಹನವಾಗಿದ್ದರು. ಬೆಂಕಿ ನಂದಿಸಲು ತೆರಳಿದ್ದ ಹಲವು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲದೆ ಹಲವು ಪ್ರಾಣಿ, ಪಕ್ಷಿಗಳು ಬಲಿಯಾಗಿದ್ದವು.

ರಸ್ತೆ ಸಂಚಾರ ಅಸ್ತವ್ಯಸ್ತ
ಬಂಡೀಪುರ ಅರಣ್ಯಕ್ಕೆ ಬೆಂಕಿ ಬಿದ್ದ ಪರಿಣಾಮ ಊಟಿ - ಮೈಸೂರು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು ಬೆಂಕಿ ಮತ್ತಿ ಹೊಗೆಯ ಕಾರಣ ವಾಹನ ಸವಾರರು ಪ್ರವಾಸವನ್ನು ಮೊಟಕುಗೊಳಿಸಿ ವಾಪಸ್ ತಮ್ಮ ಸ್ವಕ್ಷೇತ್ರಗಳಿಗೆ ಹಿಂತಿರುಗುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News