ಮೈಸೂರು ಜಿ.ಪಂ ಅಧ್ಯಕ್ಷೆಯಾಗಿ ಜೆಡಿಎಸ್‍ನ ಪರಿಮಳಾ ಶ್ಯಾಮ್ ಅವಿರೋಧ ಆಯ್ಕೆ

Update: 2019-02-23 16:24 GMT

ಮೈಸೂರು,ಫೆ.2: ಮೈಸೂರು ಜಿಲ್ಲಾ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಜೆಡಿಎಸ್‍ನ ಪರಿಮಳ ಶ್ಯಾಮ್, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಗೌರಮ್ಮ ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾದರು.

ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಜಿ.ಪಂ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರಿಮಳಾ ಶ್ಯಾಮ್, ಉಪಾಧ್ಯಕ್ಷರಾಗಿ ಹುಣಸೂರು ತಾಲೂಕಿನ ಬಿಳಿಕೆರೆ ಜಿ.ಪಂ. ಕ್ಷೇತ್ರದ ಅಭ್ಯರ್ಥಿ ಗೌರಮ್ಮ ಸೋಮಶೇಖರ್ ಅವರು ಆಯ್ಕೆಯಾಗಿದ್ದು, ಚುನಾವಣಾಧಿಕಾರಿ ಯಶವಂತ್ ಅವರು ಅಧಿಕೃತ ಘೊಷಣೆ ಮಾಡಿದರು.

ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ಈ ಹಿಂದಿನ ಒಪ್ಪಂದದಂತೆ ಬಿಜೆಪಿ ಯೊಂದಿಗಿನ ಮೈತ್ರಿ ಕಡಿದುಕೊಂಡು ಕಾಂಗ್ರೆಸ್ ಜತೆ ಜೆಡಿಎಸ್  ಕೈ ಜೋಡಿಸಿದ್ದು, ಇದೀಗ ಜೆಡಿಎಸ್ ನ ಪರಿಮಳಾ ಶ್ಯಾಮ್ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಪರಿಮಳಾ ಶ್ಯಾಮ್ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ನಿಂದ ಗೌರಮ್ಮ ಸೋಮಶೇಖರ್, ಬಿಜೆಪಿಯಿಂದ ಗುರುಸ್ವಾಮಿ ಕಣಕ್ಕಿಳಿದಿದ್ದು, ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಬಿಜೆಪಿಯ ಗುರುಸ್ವಾಮಿ ನಾಮಪತ್ರ ಹಿಂಪಡೆದು, ಚುನಾವಣೆ ಬಹಿಷ್ಕರಿದರು. ಜೆಡಿಎಸ್ ಕಾಂಗ್ರೆಸ್ ಮೈತ್ರಿಗೆ ಬಹುಮತವಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಗೌರಮ್ಮ ಸೋಮಶೇಖರ್ ಅವರು ಮೈಸೂರು ಜಿಪಂನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭ ಚುನಾವಣಾ ಪ್ರಾದೇಶಿಕ ಆಯುಕ್ತರಾದ ಯಶವಂತ್, ಸಹಾಯಕ ಚುನಾವಣಾಧಿಕಾರಿ ರೂಪಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ಉಪಸ್ಥಿತರಿದ್ದರು. ಇದೇ ವೇಳೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಇಬ್ಬರನ್ನು ಹೂ ಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭ ಮಾಜಿ ಅಧ್ಯಕ್ಷೆ ನಯೀಮಾ ಸುಲ್ತಾನ್ ನಜೀರ್ ಅಹ್ಮದ್ ಮತ್ತಿತರರಿದ್ದರು.

ಪಕ್ಷಗಳ ಬಲಾಬಲ

ಜಿಲ್ಲಾ ಪಂಚಾಯತ್ ನ ಒಟ್ಟು ಸ್ಥಾನ 49. ಚುನಾವಣೆಯಲ್ಲಿ ಪಕ್ಷಗಳು ಪಡೆದ ಸ್ಥಾನಗಳು ಕಾಂಗ್ರೆಸ್ 22, ಜೆಡಿಎಸ್ 18, ಬಿಜೆಪಿ 8 ಹಾಗೂ ಪಕ್ಷೇತರ 1. ಶಾಸಕ ಅನಿಲ್ ಚಿಕ್ಕಮಾದು ಅವರಿಂದ ತೆರವಾದ ಸ್ಥಾನ ಕಾಂಗ್ರೆಸ್ ಪಾಲಾಗಿತ್ತು. ಚುನಾವಣೆ ನಂತರ ಕಾಂಗ್ರೆಸ್ ನ 3 ಸದಸ್ಯರು ಜೆಡಿಎಸ್ ಬೆಂಬಲಿಸಿದ್ದರಿಂದ ಜೆಡಿಎಸ್ 20, ಕಾಂಗ್ರೆಸ್ 20 ಸ್ಥಾನ ಪಡೆದು ಸಮಬಲ ಸಾಧಿಸಿದ್ದವು. ಸದ್ಯ ಪಕ್ಷಗಳ ಬಲಾ ಬಲ ಕಾಂಗ್ರೆಸ್ 20, ಜೆಡಿಎಸ್ 20, ಬಿಜೆಪಿ 8 ಹಾಗೂ ಪಕ್ಷೇತರ 1 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News