ವೋಲ್ಟೇಜ್ ಸಮಸ್ಯೆ ಪರಿಹರಿಸಲು ಸಂಸದ ಡಿ.ಕೆ.ಸುರೇಶ್ ಒತ್ತಾಯ

Update: 2019-02-23 16:34 GMT

ಚನ್ನಪಟ್ಟಣ, ಫೆ.23: ಹಗಲು ತ್ರೀಫೇಸ್ ವಿದ್ಯುತ್ ಪೂರೈಕೆಯಲ್ಲಿ ವೋಲ್ಟೇಜ್ ಕುಸಿತ, ಸರಬರಾಜು ಕಡಿತ ಸೇರಿದಂತೆ ಸಮಸ್ಯೆಗಳು ಕಾಡುತ್ತಿವೆ. ಅದರ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಇಂಧನ ಖಾತೆ ಜವಾಬ್ದಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಸದ ಡಿ.ಕೆ.ಸುರೇಶ್ ಒತ್ತಾಯಿಸಿದರು.

ಶನಿವಾರ ಚನ್ನಪಟ್ಟಣದಲ್ಲಿ ಸತ್ತೇಗಾಲದಿಂದ ಇಗ್ಗಲೂರಿನ ಎಚ್.ಡಿ.ದೇವೇಗೌಡ ಬ್ಯಾರೇಜ್‌ಗೆ ಗುರುತ್ವಾಕರ್ಷಣೆ ಮೂಲಕ 540 ಕೋಟಿ ರೂ.ವೆಚ್ಚದಲ್ಲಿ ಕಾವೇರಿ ನೀರು ಹರಿಸುವ ಯೋಜನೆ ಸಹಿತ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿದ್ದು, ಪ್ರಸ್ತುತ ಸಮಸ್ಯೆ ಕಾಡುತ್ತಿರುವ ಬಗ್ಗೆ ಕ್ಷೇತ್ರದ ಜನತೆ ತಮ್ಮ ಬಳಿ ದೂರಿದ್ದಾರೆ. ಈ ವೇದಿಕೆಯಿಂದಲೇ ತಮ್ಮ ಗಮನ ಸೆಳೆಯುತ್ತಿದ್ದು, ತಕ್ಷಣವೇ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಮೂಲಕ ರೈತರ ಹಿತ ಕಾಯಬೇಕು ಎಂದು ಅವರು ಕೋರಿದರು.

ಚನ್ನಪಟ್ಟಣ, ರಾಮನಗರ, ಮಾಗಡಿ ನಗರಗಳಲ್ಲಿ ವಸತಿ ರಹಿತ ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕೆನ್ನುವುದು ಸುಮಾರು 15 ವರ್ಷಗಳ ಬೇಡಿಕೆಯಾಗಿದೆ. ಅಲ್ಲಿಂದ ನಡೆದ ಅನೇಕ ಪ್ರಯತ್ನಗಳು ವಿಫಲವಾಗಿದ್ದು, ಶೀಘ್ರವೇ ನಿವೇಶನ ಹಂಚಿಕೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕುಮಾರಸ್ವಾಮಿ ಅವರಲ್ಲಿ ಸುರೇಶ್ ಮನವಿ ಮಾಡಿದರು.

ಚನ್ನಪಟ್ಟಣದ ಖಾಸಗಿ ಬಸ್ ವಿವಾದ ಬಗೆಹರಿಸಿ, ಕಾಮಗಾರಿ ಪೂರ್ಣಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಆಸುಪಾಸಿನಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಸೇರಿದಂತೆ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಹಾದಿಯಲ್ಲಿ ಕೊಂಡೊಯ್ಯಲು ಯೋಜನೆ ರೂಪಿಸಬೇಕು ಎಂದು ಅವರು ಬೇಡಿಕೆಯಿಟ್ಟರು.

ಹೈನೋದ್ಯಮದಲ್ಲಿ ಗುಜರಾತ್ ರಾಜ್ಯದ ಸರಿಸಮನಾಗಿ ಕರ್ನಾಟಕ ದಾಪುಗಾಲಿಡುತ್ತಿದೆ. ರಾಮನಗರ ಜಿಲ್ಲೆಯಲ್ಲಿ ರೇಷ್ಮೆಯ ಜತೆಗೆ ಕ್ಷೀರಕ್ರಾಂತಿ ಆಗುತ್ತಿದೆ. ಸಿಲ್ಕ್ ಮತ್ತು ಮಿಲ್ಕ್ ಜಿಲ್ಲೆ ಎಂದೇ ಈಗ ರಾಮನಗರ ಖ್ಯಾತಿ ಪಡೆದಿದೆ. ಎರಡೂ ಉದ್ಯಮಗಳನ್ನು ಅವಲಂಬಿಸಿದವರಿಗೆ ಕಾಯಕಲ್ಪನೀಡುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಂಡಿರುವ ಬಗ್ಗೆ ಸುರೇಶ್ ಪ್ರಶಂಸಿಸಿದರು.

ಹಾಲಿನ ಪ್ರೋತ್ಸಾಹ ಧನ ಹೆಚ್ಚಿಸಿ, ಹೈನೋದ್ಯಮ ಅವಲಂಬಿತರ ಬದುಕು ಹಸನಾಗಿಸುತ್ತಿದೆ. ರಾಜ್ಯದ 22 ಲಕ್ಷ ರೈತ ಕುಟುಂಬಗಳಿಗೆ ವಾರ್ಷಿಕ 2450 ಕೋಟಿ ರೂ. ನೇರವಾಗಿ ಖಾತೆಗೆ ಜಮೆಯಾಗುತ್ತಿದೆ. ಸಮ್ಮಿಶ್ರ ಸರಕಾರ ನುಡಿದಂತೆ ನಡೆದು, ಜನ ಮನ್ನಣೆಗೆ ಪಾತ್ರವಾಗಿದೆ ಎಂದು ಅವರು ಹೇಳಿದರು.

ಮುಂದಿನ ಐದು ವರ್ಷದಲ್ಲಿ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಬೇಡಿಕೆ ಬರಲಿದೆ. ರಾಜ್ಯದಲ್ಲಿ ರೈತರ ಆರ್ಥಿಕ ಮಟ್ಟವನ್ನು ಮೇಲೆತ್ತಲು ಸರಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ರಾಮನಗರ ಜಿಲ್ಲೆಗೆ ಸತ್ತೇಗಾಲದಿಂದ ಗುರುತ್ವಾಕರ್ಷಣೆ ಮೂಲಕ ಕಾವೇರಿ ನೀರು ತರಲು 540 ಕೋಟಿ ರೂ.ವೆಚ್ಚದ ಯೋಜನೆ ರೂಪಿತವಾಗಿದೆ. ಇದರಿಂದ 38 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಒದಗಿಸುವ ಗುರಿ ಹೊಂದಲಾಗಿದೆ ಎಂದು ಸುರೇಶ್ ವಿವರಿಸಿದರು.

ಅಭಿವೃದ್ಧಿ ವಿಷಯದಲ್ಲಿ ರಾಮನಗರವನ್ನು ರಾಜ್ಯದಲ್ಲೇ ನಂಬರ್ 1 ಜಿಲ್ಲೆಯನ್ನಾಗಿಸಲು ಮುಖ್ಯಮಂತ್ರಿ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ನಾನು ಕೈ ಜೋಡಿಸಿ, ದುಡಿಯುತ್ತಿದ್ದೇವೆ. ಜನತೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು, ಔದ್ಯೋಗಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News