ರಾಜ್ಯ ಸರ್ಕಾರದ ಸ್ಟೇರಿಂಗ್ ಒಬ್ಬರ ಬಳಿ, ಬ್ರೇಕ್ ಇನ್ನೊಬ್ಬರ ಬಳಿ ಇದೆ: ಕೇಂದ್ರ ಸಚಿವ ರೂಪಾಲಾ ವ್ಯಂಗ್ಯ

Update: 2019-02-23 16:55 GMT

ವಿಜಯಪುರ,ಫೆ.23: ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ದೋಸ್ತಿ ಸರ್ಕಾರ ಒಂದು ತ್ರಿಚಕ್ರ ವಾಹನದಂತಿದೆ. ಅದರ ಬ್ರೇಕ್ ಒಬ್ಬರ ಬಳಿ ಇದ್ದರೆ, ಸ್ಟೇರಿಂಗ್ ಇನ್ನೊಬ್ಬರ ಕೈಯಲ್ಲಿದೆ ಎಂದು ಕೇಂದ್ರ ಕೃಷಿ ಸಚಿವ ಪುರಷೋತ್ತಮ ರೂಪಾಲಾ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು.

ವಿಜಯಪುರದ ಕನಕದಾಸ ಬಡಾವಣೆಯ ಬಳಿ ಶನಿವಾರ ಜರುಗಿದ ಭಾರತೀಯ ಜನತಾ ಪಕ್ಷದ ವಿಜಯಪುರ ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಮೋದಿ ವಿಜಯ ಸಂಕಲ್ಪ ಯಾತ್ರೆ ಹಾಗೂ ಶಕ್ತಿ ಕೇಂದ್ರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ವ್ಯಂಗ್ಯಭರಿತವಾಗಿ ಟೀಕಿಸಿದರು. ರಾಜ್ಯ ಸರ್ಕಾರ ತ್ರಿಚಕ್ರ ವಾಹನದಂತೆ ಸಾಗಿದೆ. ಸ್ಟೇರಿಂಗ್ ಒಬ್ಬರ ಬಳಿ ಇದೆ. ಹ್ಯಾಂಡಲ್ ಒಬ್ಬರ ಕೈಯಲ್ಲಿದೆ, ಹಾರ್ನ್ ಇನ್ನೊಬ್ಬರ ಕೈಯಲ್ಲಿದೆ. ಮುಖ್ಯಮಂತ್ರಿಯಂತೂ ನಾಮಕಾವಾಸ್ತೆ ಆಗಿದ್ದಾರೆ. ಅವರಿಗೆ ಇದು ಕೇವಲ ನೋಡುವುದಷ್ಟೇ ಕೆಲಸ ಎಂದರು. ರಾಜ್ಯದಲ್ಲಿ ಆಡಳಿತ ಸುವ್ಯವಸ್ಥೆ ಹಾಳಾಗಿದ್ದು, ರಾಜ್ಯವನ್ನು ಸರ್ವನಾಶ ಮಾಡುವ ಕಾರ್ಯದಲ್ಲಿ ರಾಜ್ಯ ಸರ್ಕಾರ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರ ವಿರುದ್ಧ ಹೋರಾಡಲು ಶಕ್ತಿ ಇಲ್ಲದೇ ಪಕ್ಷಗಳು ಮಹಾ ಘಟಬಂದನ್ ರಚಿಸಿಕೊಂಡಿವೆ. ಮೋದಿ ಅವರ ವಿರುದ್ಧ ಹೋರಾಡುವ ಶಕ್ತಿ ಇಲ್ಲದ ಕಾರಣದಿಂದಾಗಿ ಮೊದಲು ಬೇರೆ ಬೇರೆಯಾಗಿ ಹೋರಾಡುತ್ತಿದ್ದ ಪಕ್ಷಗಳು ಈಗ ಒಂದಾಗಿವೆ. ಈ ಮಹಾಘಟಬಂದನ್ ವರನಿಲ್ಲದ ಮದುವೆ ಮೆರವಣಿಗೆಯಂತಾಗಿದೆ ಎಂದು ವ್ಯಂಗ್ಯವಾಡಿದರು. ವರನೇ ಇಲ್ಲ, ಆದರೂ ಮದುವೆಯ ಮೆರವಣಿಗೆ ನಡೆಯುತ್ತಿದೆ, ಯಾರಿಗೆ ವರಮಾಲೆ ಹಾಕಬೇಕು ಎಂಬುದೇ ಗೊತ್ತಾಗಿಲ್ಲ, ಆದರೂ ಸಹ ವಿಜಯಮಾಲೆ ಮೋದಿ ಅವರ ಕೊರಳಲ್ಲಿ ಶೋಭಿಸುವುದಂತೂ ಸತ್ಯ, ನಿಶ್ಚಿತ ಎಂದು ಭವಿಷ್ಯ ನುಡಿದರು.

ಪ್ರಧಾನಿ ಮೋದಿ ಅವರು ಸ್ವಚ್ಛವಾದ ಆಡಳಿತ ನೀಡುತ್ತಿದ್ದಾರೆ. 15 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿ ಹಾಗೂ ಈಗ ಪ್ರಧಾನಿಯಾಗಿರುವ ಮೋದಿ ಅವರ ತಾಯಿ ಇಂದಿಗೂ ಸಣ್ಣ 2 ಬಿಎಚ್‍ಕೆ ನಿವಾಸದಲ್ಲಿ ವಾಸ ಮಾಡುತ್ತಿದ್ದಾರೆ. ಇದು ಮೋದಿ ಅವರ ಪ್ರಾಮಾಣಿಕತೆಯ ನಿದರ್ಶನ ಎಂದರು.

ಕಾಂಗ್ರೆಸ್ ನಾಯಕರು ಬಾವಲಿ

ಪ್ರಧಾನಿ ನರೇಂದ್ರ ಮೋದಿ ಕೃಷಿಕರನ್ನು, ಸೈನಿಕರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಸೈನಿಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಲು ಹಿಂದಿನ ಸರ್ಕಾರಗಳಿಗೆ ಸಾಧ್ಯವಾಗಲಿಲ್ಲ. ಆದರೆ ಮೋದಿ ಸರ್ಕಾರ ಸೈನಿಕರಿಗೆ ಆಧುನಿಕ ಶಸ್ತ್ರಾಸ್ತ್ರ ಹಾಗೂ ಬುಲೆಟ್‍ಫ್ರೂಫ್ ಜಾಕೆಟ್ ನೀಡುವ ಮೂಲಕ ಸೈನ್ಯಕ್ಕೆ ಶಕ್ತಿ ತುಂಬಿದ್ದಾರೆ. ಇಷ್ಟೆಲ್ಲಾ ಸಾಧನೆ ಇದ್ದರೂ ಸಹ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸರ್ಕಾರದ ಸಾಧನೆ ಕಾಣುತ್ತಿಲ್ಲ. ಅವರು ಒಂದು ರೀತಿ ಬಾವಲಿಗಳಿದ್ದಂತೆ. ಹಗಲು ಹೊತ್ತಿನಲ್ಲಿ ಗಿಡಮರಗಳಿಗೆ ಜೋತು ಬೀಳುವ ಬಾವಲಿಗಳಿಗೆ ಹಗಲಿನಲ್ಲಿ ಏನಾಗುತ್ತದೆಯೋ ಕಾಣುವುದಿಲ್ಲ. ಅವುಗಳು ತಮ್ಮ ಜೀವನ ಆರಂಭಿಸುವುದೇ ರಾತ್ರಿ. ಹೀಗಾಗಿ ತಮ್ಮ ಅವಧಿಯಲ್ಲಂತೂ ಅಭಿವೃದ್ಧಿ ನೋಡದ ಕಾಂಗ್ರೆಸ್ ನಾಯಕರಿಗೆ ಈಗ ಮೋದಿ ಸರ್ಕಾರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಮಾಜಿ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ಮುರುಗೇಶ ನಿರಾಣಿ, ಸಿದ್ದು ಸವದಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಅರುಣ ಶಹಾಪೂರ, ಹಣುಮಂತ ನಿರಾಣಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News