×
Ad

ಏರ್‌ಶೋ ಅಗ್ನಿದುರಂತ

Update: 2019-02-23 23:21 IST

ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದ ಕಾರು ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿ ಅವಘಡ ಸಂಭವಿಸಿ 300ಕ್ಕೂ ಅಧಿಕ ಕಾರುಗಳು ಸುಟ್ಟು ಕರಕಲಾದ ಘಟನೆ ಶನಿವಾರ ನಡೆದಿದೆ. ಈ ವೇಳೆ ದಟ್ಟ ಹೊಗೆ ಆವರಿಸಿಕೊಂಡಿದ್ದರಿಂದ ವೈಮಾನಿಕ ಪ್ರದರ್ಶನ ರದ್ದು ಮಾಡಲಾಯಿತು. ವೈಮಾನಿಕ ಪ್ರದರ್ಶನ ಆರಂಭವಾದ ದಿನದಿಂದಲೂ ಒಂದಲ್ಲ ಒಂದು ರೀತಿಯ ಅವಘಡಗಳು ಸಂಭವಿಸುತ್ತಿದ್ದು, ಕಳೆದ ಮಂಗಳವಾರ ತಾಲೀಮು ನಡೆಸುತ್ತಿದ್ದ ಸಂದರ್ಭದಲ್ಲಿ ಸೂರ್ಯಕಿರಣ್ ಯುದ್ದ ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಪೈಲಟ್ ಮರಣ ಹೊಂದಿದ್ದರು. ಇದೀಗ ಇದು ಎರಡನೇ ಪ್ರಕರಣವಾಗಿದ್ದು, ಈ ಘಟನೆಯಿಂದ ಜನತೆ ಬೆಚ್ಚಿಬಿದ್ದಿದ್ದಾರೆ. ವೈಮಾನಿಕ ಪ್ರದರ್ಶನಕ್ಕೆ ಆಗಮಿಸಿದ್ದ ಸಾರ್ವಜನಿಕರು ಬೆಂಕಿ, ದಟ್ಟ ಹೊಗೆ ಕಂಡು ಆತಂಕಕ್ಕೆ ಒಳಗಾಗಿದ್ದರು. ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಗೇಟ್ ನಂ.5 ರಲ್ಲಿ ನಿಗದಿಪಡಿಸಿದ್ದ ಕಾರು ನಿಲುಗಡೆ ಸ್ಥಳದಲ್ಲಿ ಮಧ್ಯಾಹ್ನ 12 ರ ವೇಳೆಗೆ ಅಲ್ಲಿದ್ದ ಒಣ ಹುಲ್ಲಿಗೆ ಬೆಂಕಿಹತ್ತಿಕೊಂಡಿದ್ದು, ಅದು ಕಾರಿಗೆ ಹತ್ತಿದೆ. ಇದರಿಂದ ಒಂದು ಕಾರಿನಿಂದ ಮತ್ತೊಂದು ಕಾರಿಗೆ ಹೊತ್ತಿಕೊಂಡು ಬೆಂಕಿ ರೌದ್ರಾವತಾರ ತಾಳಿ ಕಾರುಗಳು ಧಗಧಗನೆ ಹೊತ್ತಿ ಉರಿದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor