ಕೇಂದ್ರದ ಮೋದಿ ಸರ್ಕಾರದ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ: ಯಡಿಯೂರಪ್ಪ

Update: 2019-02-23 17:58 GMT

ವಿಜಯಪುರ,ಫೆ.23: ರಾಜ್ಯದಲ್ಲಿ 22 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಿದರೆ ರಾಜ್ಯ ಸರ್ಕಾರ ಉರುಳುತ್ತದೆ. ರಾಜ್ಯದಲ್ಲಿ 22 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವವರೆಗೂ ನಾನು ಒಂದು ಕ್ಷಣ ವಿರಮಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. 

ವಿಜಯಪುರದ ಕನಕದಾಸ ಬಡಾವಣೆ ಬಳಿ ಶನಿವಾರ ಜರುಗಿದ ಭಾರತೀಯ ಜನತಾ ಪಕ್ಷದ ವಿಜಯಪುರ ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರದ ವಿಜಯ ಸಂಕಲ್ಪ ಯಾತ್ರೆ ಹಾಗೂ ಶಕ್ತಿಕೇಂದ್ರ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಸಂದೇಶ ನೀಡಿದ ಅವರು, ರಾಜ್ಯದ 22 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿಜಯಪತಾಕೆ ಮೊಳಗಿಸಬೇಕಿದೆ. ಈ ಕಾರ್ಯ ಪೂರ್ಣಗೊಳ್ಳುವವರೆಗೂ ನಾನು ವಿರಮಿಸುವುದಿಲ್ಲ. ಒಂದು ವೇಳೆ ರಾಜ್ಯದಲ್ಲಿ 22 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದರೆ ರಾಜ್ಯ ಸರ್ಕಾರ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಮತ್ತೊಮ್ಮೆ ಸರ್ಕಾರದ ಪತನದ ಭವಿಷ್ಯವನ್ನು ಸೂಚ್ಯವಾಗಿ ವಿವರಿಸಿದರು. 

ದೇಶದ ಇತಿಹಾಸದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನಂತರ ದೇಶ ಕಂಡ ಧೀಮಂತ ನಾಯಕ ನರೇಂದ್ರ ಮೋದಿ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಸಂಕಲ್ಪವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮಾಡಬೇಕಿದೆ ಎಂದು ಕರೆ ನೀಡಿದರು. ಕೆಲವೇ ಸೀಟುಗಳ ಕೊರತೆಯಿಂದಾಗಿ ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ. ಕುಮಾರಸ್ವಾಮಿ ಅವರು ಕ್ಲರ್ಕ್ ನಂತೆ ಕೆಲಸ ಮಾಡುತ್ತೇನೆ ಎಂದರೆ ರಾಜ್ಯದ ಅವ್ಯವಸ್ಥೆಯನ್ನು ನೀವೇ ಊಹಿಸಿಕೊಳ್ಳಿ ಎಂದರು. 

ವಿಧಾನಸೌಧದ ಮುಂದೆಯೇ ಸಚಿವರೊಬ್ಬರ ಆಪ್ತ ಸಹಾಯಕರು ಲಂಚ ಸ್ವೀಕರಿಸಿದ್ದು ಸೇರಿದಂತೆ ಅನೇಕ ಭ್ರಷ್ಟಾಚಾರ ಹಗರಣಗಳು ನಡೆದಿವೆ. ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ವರ್ಗಾವಣೆ ದಂಧೆ ಜೋರಾಗಿದೆ. ಲಕ್ಷ ಲಕ್ಷ ಕೊಟ್ಟು ಆಯಕಟ್ಟಿನ ಸ್ಥಳಕ್ಕೆ ಬರುವ ಅಧಿಕಾರಿ ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತಾನೆ ಎಂದು ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. 

ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರದ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಭ್ರಷ್ಟಾಚಾರದ ಆರೋಪವಿಲ್ಲ. ಪ್ರಧಾನಿ ಮೋದಿ ಅವರು ಒಂದೇ ಒಂದು ದಿನ ರೆಸ್ಟ್ ತೆಗೆದುಕೊಂಡ ಉದಾಹರಣೆ ಇಲ್ಲ. ಇಂತಹ ಪ್ರಧಾನಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವುದು ನಮ್ಮೆಲ್ಲರ ಸಂಕಲ್ಪವಾಗಬೇಕು ಎಂದು ಕರೆ ನೀಡಿದರು. 

ಪಾಕಿಸ್ತಾನಕ್ಕೆ ಬೆಂಬಲ ದೇಶದ್ರೋಹವಿದ್ದಂತೆ 
ಪುಲ್ವಾಮಾ ಘಟನೆಯಿಂದಾಗಿ ಹಲವಾರು ಯೋಧರು ಅಮೂಲ್ಯ ಪ್ರಾಣ ಕಳೆದುಕೊಂಡಿದ್ದಾರೆ. ಈ ರೀತಿಯ ಘಟನೆಗಳು ಮರುಕಳಿಸಬಾರದು. ಯೋಧರ ಮೇಲೆ ನಡೆದ ದಾಳಿಗೆ ಪ್ರತೀಕಾರ ತೀರಿಸಲಾಗುವುದು ಎಂದು ಪ್ರಧಾನಿ ಮೋದಿ ಈಗಾಗಲೇ ಘೋಷಿಸಿದ್ದಾರೆ. ಇಂತಹ ದಿಟ್ಟ ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕಾಗಿದೆ ಎಂದರು. 

ಕೆಲವು ದೇಶವಿರೋಧಿಗಳು ದೇಶದಲ್ಲಿದ್ದುಕೊಂಡು ಪಾಕಿಸ್ತಾನದ ಬಗ್ಗೆ ಮಾತನಾಡುತ್ತಿದ್ದಾರೆ. ಟೀಕೆ ಮಾಡುವ ಭರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸುವಂತೆ ಮಾತನಾಡುತ್ತಿದ್ದಾರೆ. ಕೆಲವು ದೇಶವಿರೋಧಿಗಳು ಪಾಕಿಸ್ತಾನದ ಬಗ್ಗೆ ಮಾತನಾಡುವುದು ನಾಚಿಕೇಡಿತನ ಸಂಗತಿ. ಪಾಕ್ ಬೆಂಬಲಿಸುವುದು ಒಂದು ಘೋರವಾದ ದೇಶದ್ರೋಹ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್-ಜೆಡಿಎಸ್ ಮನೆಗಳನ್ನು ಬಿಜೆಪಿ ಮನೆಗಳನ್ನಾಗಿಸಿ
ಭಾರತೀಯ ಜನತಾ ಪಕ್ಷಕ್ಕೆ ಮತ ನೀಡದವರನ್ನು ಭೇಟಿ ಮಾಡಿ, ಅವರಿಗೆ ಬಿಜೆಪಿ ಸರ್ಕಾರದ ಸಾಧನೆ, ಜನಪರ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಿ. ಕಾಂಗ್ರೆಸ್-ಜೆಡಿಎಸ್ ಮನೆಗಳನ್ನು ಬಿಜೆಪಿ ಮನೆಗಳನ್ನಾಗಿಸುವ ಸಂಕಲ್ಪವನ್ನು ಕಾರ್ಯಕರ್ತರು ಮಾಡಬೇಕು. ಹಣಬಲ, ಹೆಂಡದ ಬಲ, ತೋಳ್ಬಲ, ಅಧಿಕಾರ ಬಲ, ಜಾತಿವಿಷ ಬೀಜ ಬಿತ್ತಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News