×
Ad

ಜಾನಪದ ಕ್ಷೇತ್ರದ ಏಳಿಗೆಗೆ ರಾಜ್ಯ ಸರಕಾರ ಬದ್ಧ: ಸಚಿವ ಕೆ.ಜೆ ಜಾರ್ಜ್

Update: 2019-02-24 17:38 IST

ಚಿಕ್ಕಮಗಳೂರು, ಫೆ.24: ಜಾನಪದ ಕಲೆ ಹಾಗೂ ಸಾಹಿತ್ಯ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಆಧುನಿಕ ತಂತ್ರಜ್ಞಾನಗಳ ಭರಾಟೆಯ ನಡುವೆ ಕಳೆದು ಹೋಗುತ್ತಿದ್ದ ವಿಶಿಷ್ಟ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾನಪದ ಸಮ್ಮೇಳನಗಳು ಅತ್ಯಾವಶ್ಯಕವಾಗಿದ್ದು, ಈ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ರಾಜ್ಯ ಸರಕಾರ ಹೆಚ್ಚು ಪ್ರೋತ್ಸಾಹ ನೀಡಲು ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ತಾಲೂಕಿನ ಮಳಲೂರು ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್‍ನ ಜಿಲ್ಲಾ ಘಟಕ ರವಿವಾರ ಆಯೋಜಿಸಿದ್ದ ಜಿಲ್ಲೆಯ ಪ್ರಥಮ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ತಲೆಮಾರಿನ ಅನಕ್ಷರಸ್ಥ ಜನರು ಅಭಿವ್ಯಕ್ತಗೊಳಿಸಿದ ಬದುಕು-ಭಾವನೆಗಳೇ ಜಾನಪದವಾಗಿದೆ. ನಾಡಿನ ಕಲೆ, ಸಂಸ್ಕೃತಿ ಜಾನಪದ ಕ್ಷೇತ್ರದಿಂದಾಗಿ ಶ್ರೀಮಂತವಾಗಿದೆ. ಅವಿದ್ಯಾವಂತರಿಂದ ಹುಟ್ಟಿಕೊಂಡ ಜಾನಪದ ಸಂಸ್ಕೃತಿಯೆಡೆಗೆ ಪ್ರಸಕ್ತ ವಿದ್ಯಾವಂತರೂ ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜಾರ್ಜ್ ಅಭಿಪ್ರಾಯಿಸಿದರು.

ಕರ್ನಾಟಕ ನೂರಾರು ಜಾನಪದ ಕಲೆಗಳ ತವರೂರಾಗಿದ್ದು, ನಾಡಿನ ಸಾವಿರಾರು ಜಾನಪದ ಕಲಾವಿದರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸುವ ಮೂಲಕ ರಾಜ್ಯದ ಕೀರ್ತಿಯನ್ನು ಎಲ್ಲೆಡೆ ಪಸರಿಸಿದ್ದಾರೆ. ಜಿಲ್ಲೆಯ ಕಡೂರು, ತರೀಕೆರೆ ತಾಲೂಕುಗಳ ಗ್ರಾಮೀಣ ಭಾಗಗಳಲ್ಲಿ ವೀರಗಾಸೆ, ಚಟ್ಟಿಮೇಳ ಹಾಗೂ ಮಲೆನಾಡಿನ ಗ್ರಾಮೀಣ ಭಾಗಗಳಲ್ಲಿ ಅಂಟಿಕೆ-ಪಿಂಟಿಕೆಯಂತಹ ವಿಶಿಷ್ಟ ಜಾನಪದ ಕಲೆಗಳು ಜನಜೀವನದ ಮಧ್ಯೆ ಇಂದಿಗೂ ಹಾಸುಹೊಕ್ಕಾಗಿವೆ ಎಂದ ಅವರು, ಜಾನಪದ ಕಲೆ, ಸಾಹಿತ್ಯ ಹಾಗೂ ಕಲಾವಿದರಿಗೆ ರಾಜ್ಯ ಸರಕಾರ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಈ ಪೈಕಿ ಕಲಾವಿದರ ಪ್ರೋತ್ಸಾಹಧನ ನೀಡುವ ಯೋಜನೆಯೂ ಒಂದಾಗಿದ್ದು, ಈ ಪ್ರೋತ್ಸಾಹ ಧನವನ್ನು ಹೆಚ್ಚಿಸಲು ರಾಜ್ಯ ಸರಕಾರ ಚಿಂತಿಸಿದೆ ಎಂದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಗ್ರಾಮೀಣ ಜನರ ಬದುಕೇ ಜಾನಪದ ಕಲೆ, ಸಾಹಿತ್ಯದ ವಸ್ತುಗಳಾಗಿವೆ. ಜೀವನ ಮೌಲ್ಯಗಳನ್ನು ಕಲಿಸುವ ಜಾನಪದ ಕ್ಷೇತ್ರಕ್ಕೆ ಆಧುನಿಕ ಯುಗದಲ್ಲಿ ದುಸ್ಥಿತಿ ಬಂದೊದಗಿರುವುದು ವಿಪರ್ಯಾಸ. ಇಂತಹ ಅಮೂಲ್ಯ ಸಾಂಸ್ಕೃತಿಕ ಸಂಪತ್ತನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಜಾನಪದ ಸಮ್ಮೇಳನಗಳು ಅತ್ಯಾವಶ್ಯಕ ಎಂದರು. 

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಹಿಂದಿನ ಕಾಲದ ಅನಕ್ಷರಸ್ಥ ಜ್ಞಾನಿಗಳಿಂದ ಜಾನಪದ ಹುಟ್ಟು ಪಡೆದಿದೆ. ಜಾನಪದ ಸಂಸ್ಕೃತಿ ಇಲ್ಲದೇ ಜನರಿಲ್ಲ. ಮನರಂಜನಾ ಕ್ಷೇತ್ರದಲ್ಲಾಗಿರುವ ತಾಂತ್ರಿಕ ಬೆಳವಣಿಗೆ ಜಾನಪದಕ್ಕೆ ಸವಾಲಾಗಿ ಪರಿಣಮಿಸಿದೆ. ಆಧುನಿಕ ಕಾಲಘಟ್ಟದಲ್ಲಿ ಜನರು ಟಿವಿ, ಮೊಬೈಲ್ ಸಂಸ್ಕೃತಿಗೆ ಮಾರು ಹೋಗಿರುವುದರಿಂದ ಜಾನಪದ ವಿನಾಶದ ಅಂಚಿನಲ್ಲಿದೆ. ಆದರೆ ಇತ್ತೀಚೆಗೆ ಜಾನಪದದ ಮಹತ್ವದ ಬಗ್ಗೆ ಜನಜಾಗೃತಿ ಮೂಡುತ್ತಿದೆ. ಈ ಜಾನಪದ ಸಂಸ್ಕೃತಿಯ ಉಳಿವಿಗೆ ಇಂತಹ ಸಮ್ಮೇಳನಗಳು ಹೆಚ್ಚು ಜರಗಬೇಕೆಂದರು.

ಆಶಯ ನುಡಿಗಳನ್ನಾಡಿದ ಕಜಾಪ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಜಿಲ್ಲಾಧಿಕಾರಿ ಟಿ.ತಿಮ್ಮೇಗೌಡ, ರಾಜ್ಯದ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಿವೃತ್ತ ಜಿಲ್ಲಾಧಿಕಾರಿ ಎಚ್.ಎಲ್.ನಾಗೇಗೌಡ ಅವರು ಕರ್ನಾಟಕ ಜಾಪದ ಪರಿಷತ್ ಸ್ಥಾಪಿಸಿದ್ದಾರೆ. ಇದರ ಬೆಳವಣಿಗೆಯಲ್ಲಿ ಗೊ.ರು.ಚನ್ನಬಸಪ್ಪ ಅವರ ಪಾತ್ರ ಅಪಾರವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ 1967ರಲ್ಲಿ ರಾಜ್ಯ ಮಟ್ಟದ ಜಾನಪದ ಸಮ್ಮೇಳನ ನಡೆದಿದೆ. ಅದಾಗಿ ನಾಲ್ಕು ದಶಕಗಳ ಬಳಿಕ ಜಿಲ್ಲಾ ಮಟ್ಟದ ಪ್ರಥಮ ಜಾನಪದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಇದು ಜಿಲ್ಲೆಯ ಜನರ ಪಾಲಿಗೆ ಐತಿಹಾಸಿಕ ದಿನವಾಗಲಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್‍ನ ಜಿಲ್ಲಾಧ್ಯಕ್ಷ ಬಿ.ಜಿ.ಸುರೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಕರವೇ ತೇಗೂರು ಜಗದೀಶ್ ಮತ್ತಿತರರು ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಪುಲ್ವಾಮ ಘಟನೆಯಲ್ಲಿ ಮಡಿದ ಯೋಧರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು. ಸಾಹಿತಿ ಬೆಳವಾಡಿ ಮಂಜುನಾಥ್ ಅವರ ಜಾನಪದ ಸ್ವರೂಪ ಎಂಬ ಜಾನಪದ ಸಂಚಿಕೆ ಬಿಡುಗಡೆ ಮಾಡಲಾಯಿತು. ಇದಕ್ಕೂ ಮುನ್ನ ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಜನಪದ ವಸ್ತುಪ್ರದರ್ಶನ, ದೇಸಿ ತಳಿಯ ರಾಸುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸಮ್ಮೇಳನ ಅಂಗವಾಗಿ ವಿವಿಧ ಜಾನಪದ ಕಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ನಿವೃತ್ತ ಯೋಧ ಕೃಷ್ಣೇಗೌಡ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್‍ ಕುಮಾರ್, ಕಜಾಪ ಜಿಲ್ಲಾ ಘಟಕದ ಮಹೇಶ್, ಜಿಪಂ ಸದಸ್ಯ ಹಿರಿಗಯ್ಯ, ಅನಂತೇಗೌಡ, ಗುರುಶಾಂತಪ್ಪ, ಲಕ್ಷ್ಮೀದೇವಮ್ಮ ಮತ್ತಿತರರು ವೇದಿಕೆಯಲ್ಲಿದ್ದರು.

ಯುವಜನರಲ್ಲಿ ಜನಪದ ಕಲೆಗಳ ಮಹತ್ವ ಸಾರುವುದೇ ಸಮ್ಮೇಳನದ ಉದ್ದೇಶವಾಗಿದೆ. ಕೆಲ ರಾಜಕಾರಣಿಗಳು ಜಾನಪದದ ಬಗ್ಗೆ ವೇದಿಕೆಗಳಲ್ಲಿ ಭಾಷಣ ಬಿಗಿಯುತ್ತಾರೆ. ಆದರೆ ಅವರಿಗೆ ಜಾನಪದದ ಅರಿವು ಇರುವುದಿಲ್ಲ. ಸಮ್ಮೇಳನಕ್ಕೆ ಈ ಭಾಗದ ಪ್ರಮುಖ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. ಅವರು ಸಮಾರಂಭಕ್ಕೆ ಬಾರದೇ ಜಾನಪದ ಕಲೆ, ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ. ರಾಜಕಾರಣಿಗಳು, ಅಧಿಕಾರಿಗಳು ಜನಪದದ ಉಳಿವಿಗೆ ಹೆಚ್ಚು ಶ್ರಮಿಸಬೇಕಾದವರು, ಆದರೆ ಅವರ ನಿರ್ಲಕ್ಷವನ್ನು ಸಹಿಸಲು ಸಾಧ್ಯವಿಲ್ಲ.
-  ಟಿ.ತಿಮ್ಮೇಗೌಡ, ಕಜಾಪ ರಾಜ್ಯಾಧ್ಯಕ್ಷ,

ಮಳಲೂರು ಏತ ನೀರಾವರಿ ಯೋಜನೆ ಈ ಭಾಗದ ದಶಕಗಳ ಬೇಡಿಕೆಯಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಅನುಷ್ಟಾನ ವಿಳಂಬವಾಗಿತ್ತು. ಸದ್ಯ 3.25 ಕೋಟಿ ರೂ. ಅನುದಾನವನ್ನು ಸರಕಾರ ಬಿಡುಗಡೆ ಮಾಡಿದ್ದು, ಜಮೀನು ಮಂಜೂರು ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಕಾಮಾಗಾರಿಗೆ ಚಾಲನೆ ಸಿಗಲಿದೆ.

- ಎಂ.ಪಿ.ಕುಮಾರಸ್ವಾಮಿ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News