ಜಾನಪದ ಜನಸಾಮಾನ್ಯರ ಅನುಭವದ ಬಳ್ಳಿಯಲ್ಲಿ ಅರಳಿದ ಹೂವು: ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ
ಚಿಕ್ಕಮಗಳೂರು, ಫೆ.24: ಇತ್ತೀಚಿನ ದಿನಗಳಲ್ಲಿ ಕೈಗೊಳ್ಳಲಾಗುತ್ತಿರುವ ಹುಚ್ಚು ಸಾಹಸಗಳಿಂದಾಗಿ ಜೀವ ಸಂಬಂಧಗಳೇ ಹರಿದು ಹೋಗುತ್ತಿವೆ. ಲೆಕ್ಕವಿಲ್ಲದಷ್ಟು ಹೊಸ ರೋಗಗಳು, ಗಣನೆಗೆ ಮೀರಿದಷ್ಟು ಅಪಘಾತ-ಅವಘಡಗಳು, ಪರಸ್ಪರ ಘರ್ಷಣೆಗಳು, ವಾತಾವರಣದ ಏರು-ಪೇರು, ಭ್ರಷ್ಟಾಚಾರ-ಭಯೋತ್ಪಾದನೆಗಳು ಹೆಚ್ಚಾಗುತ್ತಿವೆ. ಜೀವ ಮೂಲಗಳನ್ನೇ ಜಾಲಾಡಿ ಕೃತಕ ಮಣ್ಣು, ಕೃತಕ ನೀರು, ಕೃತಕ ಗಾಳಿ, ಕೃತಕ ವಾತಾವರಣಗಳನ್ನು ಸೃಷ್ಟಿಸುವ ಹುಚ್ಚು ಸಾಹಸದಲ್ಲಿ ತೊಡಗಿರುವ ಮಾನವನ ಆಧುನಿಕತೆಯಿಂದಾಗಿ ಮನುಕುಲ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಗೊ.ರು.ಚನ್ನಬಸಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ ವತಿಯಿಂದ ತಾಲೂಕಿನ ಮಳಲೂರು ಗ್ರಾಮದಲ್ಲಿ ರವಿವಾರ ಆಯೋಜಿಸಲಾಗಿದ್ದ ಜಿಲ್ಲೆಯ ಪ್ರಥಮ ಜಾನಪದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನಪದವೆಂದರೆ ಕಲಬೆರಕೆ ಇಲ್ಲದ್ದು. ಪರಿಶುದ್ಧವಾದದ್ದು, ತಲೆಮಾರುಗಳಿಂದ ಹರಿದು ಬಂದದ್ದಾಗಿದೆ. ಈ ಕಾಲದವರಿಗೆ ದೇಸಿ ಅಥವಾ ಜಾನಪದ ಎಂದರೆ ಅದು ಹಳೆಯ ಕಾಲದ್ದೆಂದು ಹಳಿಯುವುದು ಶೋಕಿಯಾಗಿದೆ. ಹಳ್ಳಿಗರ ಬದುಕು ಹಳೆಯದೆಂಬುದು ನಿಜ. ಆದರೆ ಹೊಸತು ಯಾವುದು ಎಂಬುದನ್ನು ನಗರದವರು ತಿಳಿಸಬೇಕಿದೆ. ನಾವು ನಿಂತಿರುವ ಬೆಲ, ಸುಳಿಯುವ ಗಾಳಿ, ಹರಿಯುವ ನೀರು, ಉರಿಯುವ ಬೆಂಕಿ, ಮೇಲೆ ಆವರಿಸಿರುವ ಆಕಾಶ ಹೊಸದೇ ಆಗಿದೆ. ಸೃಷ್ಟಿ ಆದಾಗಿನಿಂದ ಇರುವ ಈ ಪಂಚಭೂತಗಳಿಂದಲೇ ದೇಸಿ ಸಂಸ್ಕೃತಿ ಬದುಕಿರುವುದು. ಹಾಗೆಯೇ ನಗರದವರೂ ಇದನ್ನೆ ನಂಬಿಕೊಂಡಿರುವವರು. ವ್ಯತ್ಯಾಸವೆಂದರೆ, ನಿಸರ್ಗದತ್ತವಾದ ಈ ಪಂಚಭೂತಗಳನ್ನು ದೇವರೆಂದೆ ಭಾವಿಸಿ, ಅವುಗಳನ್ನು ಕೆಡಿಸಹೋಗದೆ ಅವಕ್ಕೆ ಹೊಂದಿಕೊಂಡೇ ನಮ್ಮ ಜಾನಪದ ಬರುತ್ತಿದೆ. ಆದರೆ ಆಧುನಿಕತೆ ನಿಸರ್ಗದ ಸಹಜ ಕ್ರಿಯೆಗಳಲ್ಲಿ ಕೈ ಹಾಕಿ ಅವುಗಳನ್ನು ಕೆಡಿಸಿ ಅವುಗಳ ಶೋಷಣೆ ನಡೆಸುತ್ತಿದೆ ಎಂದು ಹೇಳಿದರು.
ದೇಸಿ ಎನ್ನುವುದು ಜನ ಸಾಮಾನ್ಯರ ಅನುಭವದ ಬಳ್ಳಿಯಲ್ಲಿ ಸದ್ದಿಲ್ಲದೆ ಅರಳಿದ ಹೂವು. ಆಧುನಿಕೆ ಎನ್ನುವುದು ಜಾಗತಿಕ ಅನುಕರಣೆಯ ಹುತ್ತದಿಂದ ಹೊರಬಂದ ಹಾವು. ದೇಸಿ ಎನ್ನುವುದು ಸ್ಥಳೀಯವಾದರೆ ಆಧುನಿಕತೆ ಪರಕೀಯವಾದುದು. ದೇಸಿ ಹೃದಯವಾದರೆ, ಆಧುನಿಕತೆ ತಲೆ ಎನ್ನಬಹುದು. ಒಂದು ವೇಳೆ ತಲೆಯ ಕೆಲಸ ನಿಂತರೂ ನಡೆಯುತ್ತದೆ. ಆದರೆ ಹೃದಯದ ಕೆಲಸ ನಿಂತರೆ ಮುಗಿದೇ ಹೋಯಿತು ಎಂದ ಅವರು, ನುಡಿ, ಬೆಡಗು, ಸರಳತೆ, ಸಹಜತೆ, ಸ್ವಾರಸ್ಯ, ಸೌಂದರ್ಯ, ಆನುಭವದ ರಸಪಾಕ, ನೋವು, ನಲಿವು ಇವುಗಳನ್ನು ಅವು ಇದ್ದಂತೆಯೇ ನೋಡಬೇಕೆಂದರೆ ನಾವು ದೇಸಿಯ ಅಂಗಳಕ್ಕೇ ಹೋಗಬೇಕು. ಕೃತಕ ನಗೆ, ಕೃತಕ ನುಡಿ-ನಡೆ, ಆಡಂಬರದ ಆಕರ್ಷಣೆ, ಕಲುಷಿತ ಮನಸ್ಸು, ಮೋಜು-ಮಜಾ ಕಾಣಬೇಕೆಂದರೆ ನಗರಗಳಿಗೆ ಹೋದರೆ ಸಾಕು ಎಂದು ತಿಳಿಸಿದರು.
ಭಾರತದಂತಹ ಹಳ್ಳಿಗಳೇ ತುಂಬಿರುವ ದೇಶಕ್ಕೆ ನಮ್ಮ ಗ್ರಾಮೀಣ ಮತ್ತು ಗುಡ್ಡಗಾಡಿನ ಜನರೇ ದೊಡ್ಡ ಆಸ್ತಿ ಎಂಬುದನ್ನು ನಾವು ಮರೆಯಬಾರದು. ಯಾವುದೇ ದೇಶದ ಘನತೆ ಗೌರವಗಳು, ಶಕ್ತಿ ಸಂಪನ್ನತೆಗಳು ನಿಂತಿರುವುದು ಅಲ್ಲಿನ ನಗರಗಳ ಅನುಕರಣೆಯ ಬೆಡಗು-ಬಿನ್ನಾಣಗಳಿಂದಲ್ಲ. ಅಲ್ಲಿನ ನೆಲದ ಸಂಸ್ಕೃತಿಯಿಂದ. ಅಲ್ಲಿನ ಜನರ ಶ್ರಮದ ಬೆವರಿನಿಂದ ಎಂಬುದನ್ನು ಅರಿಯಬೇಕು. ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕಿದೆ. ರೈತರು ಹೆಚ್ಚಿನದೇನನ್ನೂ ಕೇಳುವುದಿಲ್ಲ. ಸಮರ್ಪಕ ವಿದ್ಯುತ್, ಬೆಳೆದ ಬೆಲೆಗೆ ಸರಿಯಾದ ಬೆಲೆ ಮತ್ತು ಜಮೀನಿಗೆ ಅಗತ್ಯವಾದ ನೀರನ್ನು ಮಾತ್ರ ಕೇಳುತ್ತಾರೆ. ಸರ್ಕಾರ ಈ ಮೂರನ್ನು ರೈತರಿಗೆ ಸರಿಯಾಗಿ ನೀಡಲು ಮುಂದಾಗಬೇಕಿದೆ ಎಂದು ಹೇಳಿದರು.
ಹಳ್ಳಿಗರು ಪರಸ್ಪರ ಮಾತಾಡುವುದನ್ನು ಕೇಳುವುದೇ ಒಂದು ಅನಿರ್ವಚನೀಯ ಅನುಭವ. ಅವರ ಮಾತುಕತೆಗಳಲ್ಲಿ ಎಲ್ಲೂ ತೋರಿಕೆ ಇರುವುದಿಲ್ಲ. ಅವರ ಒಂದೊಂದು ಮಾತೂ ಸಹ ಅನುಭವದ ರಸಪಾಕದಲ್ಲಿ ಅದ್ದಿ ತೆಗೆದಂತಿರುತ್ತದೆ. ಅವರು ತಮ್ಮ ಮಾತುಗಳಲ್ಲಿ ಬೆರೆಸಿ ಹೇಳುವ ಗಾದೆಗಳು ಅನೇಕ ವೇಳೆ ದಾರ್ಶನಿಕರ ಸೂತ್ರಗಳಂತೆ ಇರುತ್ತವೆ. ಹಾಗೆಯೇ ಲೋಕಜೀವನದ ಅರ್ಥಪೂರ್ಣ ವಿಮರ್ಶೆಯಾಗಿರುತ್ತವೆ. ಜೊತೆಗೆ ಅಷ್ಟೇ ಪರಿಣಾಮಕಾರಿಯಾಗಿರುತ್ತವೆ ಎಂದು ಹೇಳಿದರು.
ಭಿಕ್ಷುಕಿ ನನ್ನ ಗುರು: ತಾವು ಜಾನಪದ ಕ್ಷೇತ್ರದತ್ತ ಬಂದ ಬಗೆಯನ್ನು ವಿವರಿಸಿದ ಗೊ.ರು.ಚ., ಎಪ್ಪತ್ತು ವರ್ಷಗಳ ಹಿಂದೆ ಒಮ್ಮೆ ಮನೆಯಲ್ಲಿ ಕುಳಿತು ಕವಿತೆಯೊಂದನ್ನು ಬರೆಯಲು ಆರಂಭಿಸಿದ್ದೆ. ಆಗತಾನೆ ಕವಿತೆಯ ಮೊದಲ ಸಾಲು ಏನೆಂದು ಯೋಚಿಸುತ್ತಿದ್ದೆ. ಆಗ ಮನೆಯ ಬಳಿ ಬಂದ ಓರ್ವ ಭಿಕ್ಷುಕಿ ಹಾಡಲು ಆರಂಭಿಸಿದಳು. ಇದರಿಂದ ಸಿಟ್ಟಿಗೆದ್ದ ನಾನು, ಆಕೆಯನ್ನು ಮುಂದಕ್ಕೆ ಹೋಗಮ್ಮ ಎಂದು ಹೇಳಿದೆ. ಆದರೆ ಆಕೆ ಸಿಟ್ಟು ಮಾಡಿಕೊಳ್ಳದೆ ಹಾಡು ಮುಂದುವರೆಸಿದಳು. ಆಕೆ ಹಾಡಿದ ಹಾಡುಗಳನ್ನು ಕೇಳಿದ ನಾನು ಸಂತಸಗೊಂಡು ಆಕೆಯಿಂದ ಕೆಲವು ಹಾಡುಗಳನ್ನು ಹಾಡಿಸಿ ಆಕೆಗೆ ಊಟವನ್ನೂ ನೀಡಿದ್ದಾಗಿ ತಿಳಿಸಿ, ಇದು ನಾನು ಜಾನಪದ ಕ್ಷೇತ್ರದತ್ತ ಹೆಚ್ಚು ಮುಖ ಮಾಡಲು ಕಾರಣವಾಯಿತು. ಆ ಹಾಡುಗಾರ್ತಿ ಭಿಕ್ಷುಕಿಯೇ ನನ್ನ ಗುರು ಎಂದರು.
ಪ್ರತಿಷ್ಠಿತ ಸಂಸ್ಥೆಯಾಗಬೇಕು:
ನಾನು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನಾಡಿನ ಎಲ್ಲಾ ಜಾನಪದ ಕ್ಷೇತ್ರದ ತಜ್ಞರ ಬೆಂಬಲದಿಂದ ಇಡೀ ಜಗತ್ತಿನಲ್ಲೇ ಪ್ರಥಮ ಎನಿಸಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಸ್ಥಾಪನೆಯಾಯಿತು. ಆದರೆ ರಾಜ್ಯ ಸರಕಾರ ಅದರ ಬೆಳವಣಿಗೆಯ ಬಗ್ಗೆ ಗಮನ ಕೊಡದಿರುವುದು ನಿಜಕ್ಕೂ ವಿಷಾದದ ಸಂಗತಿ. ಇದೊಂದು ವಿಶಿಷ್ಟರೂಪದ ವಿಶ್ವವಿದ್ಯಾನಿಲಯವಾಗಿದ್ದು, ಇದನ್ನು ಇಡೀ ವಿಶ್ವದ ಜಾನಪದಾಸಕ್ತರ ಗಮನ ಸೆಳೆಯುವ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಸುವುದು ಸರಕಾರದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಾನಪದ ವಿಶ್ವವಿದ್ಯಾನಿಲಯಕ್ಕೆ ವಿಶೇಷ ಪರಿಗಣತೆಯ ಮೇಲೆ ಅಗತ್ಯ ಆರ್ಥಿಕ ನೆರವನ್ನು ನೀಡಬೇಕು. ಪ್ರಥಮ ರಾಜ್ಯ ಸಮ್ಮೇಳನದ ಪರಿಣಾಮವಾಗಿ ಜಾನಪದಕ್ಕೆ ಸಂಬಂಧಿಸಿದ ಪರಿಷತ್ತು ಸ್ಥಾಪನೆಯಾಯಿತು. ಜಾನಪದ ಅಕಾಡೆಮಿ ಸ್ಥಾಪನೆಯಾಯಿತು. ಜನಪದ ಕಲಾವಿದರಿಗೆ ಮಾಸಾಶನ ದೊರೆಯುತ್ತಿದೆ, ವಿಶ್ವವಿದ್ಯಾನಿಲಯಗಳಲ್ಲಿರುವ ಜಾನಪದ ಅಧ್ಯಯನ, ಜಾನಪದ ವಸ್ತು ಸಂಗ್ರಹಾಲಯ ಸಮ್ಮೇಳನದ ಪರಿಣಾಮ.
- ಗೊ.ರು.ಚನ್ನಬಸಪ್ಪ
ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಗೊ.ರು.ಚನ್ನಬಸಪ್ಪ ಅವರನ್ನು ಮಹಿಳೆಯರು ಪೂರ್ಣಕುಂಬದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ಸಮ್ಮೇಳನಾಧ್ಯಕ್ಷರನ್ನು ಅಲಂಕೃತ ವಾಹನದಲ್ಲಿ ಕುಳ್ಳಿರಿಸಿ ಗ್ರಾಮದ ಗಡಿಭಾಗದಿಂದ ಸರಕಾರಿ ಶಾಲಾ ಆಟದ ಮೈದಾನದ ಬೃಹತ್ ವೇದಿಕೆವರೆಗೂ ಕರೆತರಲಾಯಿತು. ಮೆರವಣಿಗೆಯಲ್ಲಿ ಗ್ರಾಮದ ಮಹಿಳೆಯರು ಅಲಂಕೃತರಾಗಿ ನೂರೊಂದು ಪೂರ್ಣಕುಂಬವನ್ನು ಹೊತ್ತು ರಸ್ತೆಯ ಎರಡು ಬದಿಗಳಲ್ಲಿ ಸರಥಿ ಸಾಲಿನಲ್ಲಿ ಸಾಗುತ್ತಿದ್ದರೆ ಮತ್ತೊಂದು ಕಡೆ ಡೊಳ್ಳುಕುಣಿತ, ವೀರಗಾಸೆ, ತಟ್ಟಿಕುಣಿತ, ಗೊಂಬೆಕುಣಿತ ತಂಡದ ಕಲಾವಿದರು ಹೆಜ್ಜೆ ಹಾಕುತ್ತಿದ್ದರು. ಕಲಾ ತಂಡಗಳೊಂದಿಗೆ ಕೊಂಬು, ಡೋಲು, ನಾದಸ್ವರ ತಂಡಗಳು ತಮ್ಮ ಕಲಾ ಪ್ರದರ್ಶನ ಮಾಡಿತು. ಸಮ್ಮೇಳನದ ಅಂಗವಾಗಿ ಗ್ರಾಮದ ರಸ್ತೆಯ ಎರಡು ಇಕ್ಕೆಲಗಳನ್ನು ತೋರಣಗಳಿಂದ ಶೃಂಗರಿಸಲಾಗಿತ್ತು. ಗ್ರಾಮದ ಗಡಿಭಾಗದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಳ್ಳುವ ಮೂಲಕರ ಮೆರವಣಿಗೆಗೆ ಮೆರಗು ತಂದರು. ರಸ್ತೆಯ ಇಕ್ಕೆಲಗಳಲ್ಲಿ ಮಳಲೂರು ಸೇರಿದಂತೆ ಸುತ್ತಮುತ್ತಲ ಜನರು ಮೆರವಣಿಗೆ ವೈಭವವನ್ನು ಕಣ್ತುಂಬಿಕೊಳ್ಳುತ್ತಾ ಸೆಲ್ಫಿ ತಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.