ಪಕ್ಷ ಬೆಳೆದಾಗ ಒಳಜಗಳ ಸಹಜ: ಮಾಜಿ ಸಿಎಂ ಜಗದೀಶ್ ಶೆಟ್ಟರ್

Update: 2019-02-24 13:31 GMT

ಬೆಂಗಳೂರು, ಫೆ. 24: ಪಕ್ಷ ದೊಡ್ಡದಾಗಿ ಬೆಳೆದಾಗ ಮುಖಂಡರ ನಡುವೆ ಒಳಜಗಳ ಸಹಜ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಜಗದೀಶ್ ಶೆಟ್ಟರ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಂಸದ ರಮೇಶ ಜಿಗಜಿಣಗಿ ಬೆಂಬಲಿಗರು ಬಿಎಸ್‌ವೈ ಸಮ್ಮುಖದಲ್ಲೇ ಜಳವಾಡಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದ ಒಳಜಗಳದ ಹಿಂದೆ ವಿಪಕ್ಷದವರ ಕುತಂತ್ರವೂ ಇರಬಹುದು. ಈ ವಿಷಯದಲ್ಲಿ ಅಪಪ್ರಚಾರವೂ ನಡೆಯುತ್ತಿದೆ. ಆದರೆ ಈ ಎಲ್ಲ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿ ರಾಜ್ಯದಲ್ಲಿ 22 ಕ್ಷೇತ್ರ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ದುರಾಡಳಿತವೂ ನಮಗೆ ಸಹಕಾರಿಯಾಗಲಿದೆ ಎಂದ ಅವರು, ಆಪರೇಷನ್ ಕಮಲ ಆಡಿಯೊ ಪ್ರಕರಣದ ತನಿಖೆಗೆ ಸಿಟ್ ತಂಡ ರಚಿಸಿದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರೆ ಮೊದಲ ಆರೋಪಿಯಾಗುತ್ತಾರೆ. ಏಕೆಂದರೆ ಅವರು ನಾಯಕರ ಮಾತುಗಳನ್ನು ಕಾನ್ಫರೆನ್ಸ್ ಕಾಲ್ ಮೂಲಕ ಕದ್ದಾಲಿಕೆ ಮಾಡಿದ್ದಾರೆ. ಈ ಹಿಂದೆ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದ್ದರು. ಸಿಟ್ ತಂಡ ರಚನೆಗೆ ಒತ್ತಡ ಹೇರಿದವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಕುಮಾರಸ್ವಾಮಿ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶ ಅವರದ್ದು. ಸಿಟ್ ತಂಡದಿಂದ ಬಿಎಸ್‌ವೈಗೆ ಏನೂ ತೊಂದರೆ ಆಗದು ಎಂದು ಹೇಳಿದರು.

‘ಬೆಂಗಳೂರಿನ ಯಲಹಂಕದಲ್ಲಿ ನಡೆದ ಏರ್ ಶೋ ವೇಳೆ 300ಕ್ಕೂ ಅಧಿಕ ಕಾರುಗಳು ಭಸ್ಮವಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದೇ ಈ ಅವಘಡಕ್ಕೆ ಕಾರಣ. ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಸರಕಾರ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ’

-ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News