ಮಂಡ್ಯ ಜನತೆಯ ಋಣ ತೀರಿಸಲು ಚುನಾವಣೆಯಲ್ಲಿ ಸ್ಪರ್ಧೆ: ನಟಿ ಸುಮಲತಾ
ಬೆಂಗಳೂರು, ಫೆ. 24: ಮಂಡ್ಯದ ಬಗ್ಗೆ ಅಂಬರೀಶ್ ಅವರು ಅಪಾರ ಕನಸನ್ನು ಇಟ್ಟುಕೊಂಡಿದ್ದರು. ಅವರ ಕನಸನ್ನು ನನಸು ಮಾಡುವುದು ನನ್ನ ಉದ್ದೇಶ. ಮಂಡ್ಯದ ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಅಂಬರೀಶ್ ಪತ್ನಿ ಸುಮಲತಾ ಹೇಳಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಪಕ್ಷವಾದರೂ ಸರಿ, ಚುನಾವಣೆಯಲ್ಲಿ ನಿಲ್ಲಿ ಎಂದು ಮಂಡ್ಯದ ಜನತೆ ಒತ್ತಡ ಹೇರುತ್ತಿದ್ದಾರೆ. ಅವರ ಪ್ರೀತಿ, ಅಭಿಮಾನಕ್ಕೆ ಸದಾ ಚಿರಋಣಿ ಎಂದು ತಿಳಿಸಿದರು.
ಅಂಬರೀಶ್ ಇಲ್ಲ ಎನ್ನುವುದೇ ಮನಸ್ಸಿಗೆ ತುಂಬಾ ನೋವು-ಬೇಸರ ತರಿಸಿದೆ. ಅವರು ಬಿಟ್ಟುಹೋದ ಆದರ್ಶಗಳು ಮತ್ತು ಕನಸುಗಳನ್ನು ಈಡೇರಿಸುವುದು ನನ್ನ ಕೆಲಸ ಎಂದ ಅವರು, ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸುವ ಒಲವಿದೆ. ಆದರೆ ಸ್ಪರ್ಧೆ ಯಾವ ಪಕ್ಷದಿಂದ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಚುನಾವಣೆಗೆ ಸ್ಪರ್ಧಿಸುವುದು ಖಚಿತ. ಈ ಬಗ್ಗೆ ಅಭಿಮಾನಿಗಳು, ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವೆ ಎಂದರು.
ಅಂಬರೀಶ್ ಅವರ ಪ್ರೀತಿ ನನ್ನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಮಂಡ್ಯ ಜಿಲ್ಲೆಯ ಜನರ ಜೊತೆ ಇರುತ್ತೇನೆ ಎಂದು ಅವರಿಗೆ (ಅಂಬರೀಶ್) ಮಾತು ಕೊಟ್ಟಿದ್ದೇನೆ. ಆ ಮಾತನ್ನು ಉಳಿಸುವೆ ಹಾಗೂ ಮಂಡ್ಯದ ಜನರ ಋಣ ತೀರಿಸಲು ರಾಜಕೀಯಕ್ಕೆ ಪ್ರವೇಶಿಸುವೆ ಎಂದರು.
ಸಮಾಧಿಗೆ ಪೂಜೆ: ಅಂಬರೀಶ್ ಅವರ ಮೂರನೆ ತಿಂಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಟಿ ಹಾಗೂ ಪತ್ನಿ ಸುಮಲತಾ, ಕುಟುಂಬದ ಸದಸ್ಯರ ಜತೆಗೂಡಿ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಪುತ್ರ ಅಭಿಷೇಕ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಸೇರಿದಂತೆ ಚಿತ್ರರಂಗದ ಗಣ್ಯರು ಹಾಜರಿದ್ದರು.