ವೃದ್ಧೆಯ ಕೊಲೆಗೈದು ಚಿನ್ನಾಭರಣ ದರೋಡೆ
ಮಡಿಕೇರಿ, ಫೆ.24: ಮನೆಯಲ್ಲಿ ಒಬ್ಬಂಟಿಯಾಗಿದ್ದ ವೃದ್ಧ ಮಹಿಳೆಯನ್ನು ಕೊಲೆ ಮಾಡಿ ಚಿನ್ನಾಭರಣವನ್ನು ಕದ್ದೊಯ್ದಿರುವ ಘಟನೆ ಮೂರ್ನಾಡು ಸಮೀಪದ ಕುಂಬಳದಾಳು ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ರಾಧ(69) ಎಂಬವರೇ ಮೃತ ವೃದ್ದೆಯಾಗಿದ್ದು, ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂಬಳದಾಳು ನಿವಾಸಿ ರಾಧ ಎಂಬುವವರು ಮನೆಯಲ್ಲಿ ಒಬ್ಬಂಟಿಯಾಗಿ ಹಲವು ಸಮಯದಿಂದ ಜೀವನ ಸಾಗಿಸುತ್ತಿದ್ದರು. ಇಬ್ಬರು ಪುತ್ರರು ಹೊರ ಊರಿನಲ್ಲಿ ಕೆಲಸದಲ್ಲಿದ್ದು, ಮತ್ತೋರ್ವ ಮಗಳು ಕುಂಬಳದಾಳು ಗ್ರಾಮದಿಂದ 2 ಕಿ.ಮೀ. ದೂರದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕಳೆದ 2 ದಿನಗಳಿಂದ ಪುತ್ರರು ತಾಯಿ ರಾಧ ಅವರ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಫೋನ್ ರಿಸೀವ್ ಮಾಡಿರಲಿಲ್ಲ. ಇದರಿಂದ ಆತಂಕಗೊಂಡ ಪುತ್ರರು ಕೆಲಸದವರಿಗೆ ಮನೆ ಕಡೆ ತೆರಳಿ ನೋಡುವಂತೆ ತಿಳಿಸಿದ್ದಾರೆ. ಕೆಲಸದವರು ಶನಿವಾರ ಮನೆಗೆ ತೆರಳಿ ನೋಡಿದಾಗ ರಾಧ ಮೃತಪಟ್ಟ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿದ್ದಾರೆ.
ಗ್ರಾಮಸ್ಥರು ಸ್ಥಳಕ್ಕಾಗಮಿಸಿ ನಾಪೋಕ್ಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ಪೊಲೀಸ್ ಶ್ವಾನದಳ ಮತ್ತು ಬೆರಳಚ್ಚು ಸಿಬ್ಬಂದಿಗಳು ಮತ್ತು ನಾಪೋಕ್ಲು ಪೊಲೀಸರು ಕೂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತರ ಮಕ್ಕಳು ಮನೆಯನ್ನು ಪರಿಶೀಲಿಸಿದಾಗ ರಾಧ ಅವರಿಗೆ ಸೇರಿದ ಚಿನ್ನಾಭರಣಗಳು ಕಳುವಾಗಿರುವುದು ಕಂಡು ಬಂದಿದ್ದು, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗಾರರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ.