ಸಂವಿಧಾನದಿಂದ ಮಾತ್ರ ಸ್ವಾತಂತ್ರ, ಸಮಾನತೆ, ಭ್ರಾತೃತ್ವ ಸಾಧ್ಯ: ಪ್ರೊ.ಚಂದ್ರಶೇಖರ ಪಾಟೀಲ

Update: 2019-02-24 14:34 GMT

ಬೆಂಗಳೂರು, ಫೆ.24: ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಗೊಂಡಿರುವ ಸಂವಿಧಾನದಿಂದ ಮಾತ್ರ ದೇಶದಲ್ಲಿ ಸ್ವಾತಂತ್ರ, ಸಮಾನತೆ ಹಾಗೂ ಭ್ರಾತೃತ್ವ ನೆಲೆಗೊಳಿಸಲು ಸಾಧ್ಯವೆಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ ತಿಳಿಸಿದರು.

ಜಯಕರ್ನಾಟಕ ಸಂಘಟನೆಯು ನಗರದ ಕಲ್ಲಳ್ಳಿ ಸ್ಮಶಾನದಲ್ಲಿ ಆಯೋಜಿಸಿದ್ದ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರಾಂತಿಯಿಂದ ಜಾತಿ ಮತ್ತು ಧಾರ್ಮಿಕ ತಾರತಮ್ಯ ಹೋಗುತ್ತದೆ ಎಂಬ ಗ್ಯಾರಂಟಿ ಇಲ್ಲ. ನೂರೆಂಟು ದೇವರುಗಳನ್ನು ಮನೆಯಲ್ಲಿ ಪೂಜೆ ಮಾಡಿ, ಬೀದಿಗೆ ಬರುವಾಗ ಆ ದೇವರುಗಳನ್ನು ಬೆನ್ನಿಗೆ ಕಟ್ಟಿಕೊಂಡು ಬರುವುದನ್ನು ಬಿಡದ ಹೊರತು, ಸೌಹಾರ್ದಯುತ ವಾತಾವರಣ ನಿರ್ಮಾಣವಾಗುವುದಿಲ್ಲವೆಂದು ಅವರು ಹೇಳಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಒಬ್ಬ ಸೈನಿಕನ ಸಾವಿನ ಬದಲಿಗೆ ಎದುರಾಳಿಯ ಮತ್ತೊಬ್ಬ ಸೈನಿಕನ ಜೀವಬಲಿ ಪಡೆಯಬೇಕು ಎಂಬುದು ಯಾವ ನ್ಯಾಯ. ಇಂತಹ ಹೇಳಿಕೆ ನೀಡುವ ಯಾವ ಸಂಸದ, ಶಾಸಕ ಅಥವಾ ಸಂಘಟನೆ ನಾಯಕರು ಗಡಿ ಕಾಯಲು ಸಿದ್ಧರಿದ್ದಾರೆಯೆ ಎಂದು ಪ್ರಶ್ನಿಸಿದರು.

ಸಂಸದ ಹನುಮಂತಯ್ಯ ಮಾತನಾಡಿ, ಅಸಮಾನತೆ ತಲೆಮಾರುಗಳಿಗೆ ವರ್ಗವಾದಂತೆ ಮೌಲ್ಯಗಳು ಕುಸಿಯುತ್ತವೆ. ಸಾಮಾಜಿಕ ಸಮಾನತೆಯೊಂದಿಗೆ ಆರ್ಥಿಕ, ರಾಜಕೀಯ ಸಮಾನತೆಯೂ ಇಂದು ಜನರಿಗೆ ಬೇಕಿದೆ. ಮಹಾನಗರ ಪಾಲಿಕೆ ಸದಸ್ಯನಾಗಲು 3 ಕೋಟಿ ರೂ. ಶಾಸಕನಾಗಲು 10 ಕೋಟಿ ರೂ.ಖರ್ಚು ಮಾಡಬೇಕಾದ ಸ್ಥಿತಿ ಈಗಿದೆ. ನಾವು ಪ್ರಾಮಾಣಿಕ ಮುಖಂಡರನ್ನು ಆಯ್ಕೆ ಮಾಡದೆ, ಧರ್ಮಗಳ ಮಧ್ಯೆ ಧ್ವೇಷ ಭಿತ್ತುವವರನ್ನೇ ಚುಣಾಯಿಸಿದರೆ, ಸಾಮಾಜಿಕ ನ್ಯಾಯ ಗಗನಕುಸುಮ ಆಗಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News