ಪಾಕಿಸ್ತಾನದ ಪರ ಜೈಕಾರ ಆರೋಪ: ಅಸ್ಸಾಂ ಯುವಕನ ಬಂಧನ
ಮಂಡ್ಯ, ಫೆ.24: ಪಾಕಿಸ್ತಾನದ ಪರ ಜೈಕಾರ ಹಾಕಿದ್ದಾನೆಂದು ಆರೋಪಿಸಿ ಅಸ್ಸಾಂ ಮೂಲದ ಯುವಕನ ವಿರುದ್ಧ ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ಸಾಂ ಮೂಲದ ಸಾದಿಕುಲ್ಲಾ ಇಸ್ಲಾಂ(22) ಬಂಧಿತ ವ್ಯಕ್ತಿ. ಈತ ಕೆ.ಎಂ ದೊಡ್ಡಿಯ ಹೇಮರಾಜು ಸಾ ಮಿಲ್‍ನಲ್ಲಿ 20 ಜನ ಕೂಲಿ ಕಾರ್ಮಿಕರೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದು, ಕಳೆದ 2 ದಿನದ ಹಿಂದೆ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂಬ ಘೋಷಣೆ ಕೂಗುತ್ತಿದ್ದ ಎಂದು ಆರೋಪಿಸಲಾಗಿದೆ.
ಫೆ.23 ರಂದು ಮತ್ತೆ ಪಾಕ್ ಪರ ಜೈಕಾರ ಹಾಕಿದ್ದಾನೆ ಎನ್ನಲಾಗಿದ್ದು, ಈ ವೇಳೆ ಕರಡಕೆರೆ ನಾಗೇಶ್ ಮತ್ತು ಸ್ನೇಹಿತ ಈತನ ದೇಶ ದ್ರೋಹ ಕೃತ್ಯದ ಬಗ್ಗೆ ಆಸರೆ ಸೇವಾ ಟ್ರಸ್ಟ್ ಅಧ್ಯಕ್ಷ ರಘು ವೆಂಕಟೇಗೌಡ ಅವರಿಗೆ ತಿಳಿಸಿದ್ದಾರೆ.
ತನ್ನ ಸ್ನೇಹಿತರೊಂದಿಗೆ ತೆರಳಿದ ರಘು ವೆಂಕಟೇಗೌಡ ಆತನಿಗೆ ಭಾರತ್ ಮಾತಾಕಿ ಜೈ ಎಂದು ಹೇಳು ಎಂದಿದ್ದಾರೆ. ಈ ವೇಳೆ ಆತ ಎರಡು ಬಾರಿ ಭಾರತ್ ಮಾತಾ ಕಿ ಜೈ ಎಂದು ಹೇಳಿ ಮತ್ತೆ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳಿದ್ದಾನೆ ಎನ್ನಲಾಗಿದ್ದು, ಇದರಿಂದ ಕೆರಳಿದ ಯುವಕರು ಈತನಿಗೆ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಯುವಕನ ವಿರುದ್ಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಸಬ್ ಇನ್ಸ್ ಪೆಕ್ಟರ್ ಅಯ್ಯನಗೌಡ ಆರೋಪಿಯನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.
ನಮ್ಮ ನೆಲದಲ್ಲೆ ಇದ್ದು ಇಲ್ಲಿನ ಅನ್ನ ತಿಂದು ನಮ್ಮ ದೇಶದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ವ್ಯಕ್ತಿಗಳು ನಿಜಕ್ಕೂ ಮನುಷ್ಯತ್ವ ಇಲ್ಲದವರು. ಅಸ್ಸಾಂ ಮೂಲದ ಸಾದಿಕ್ ಪಾಕ್ ಪರ ಘೋಷಣೆ ಕೂಗುತಿದ್ದುದು ನಮ್ಮನ್ನು ಕೆರಳಿಸಿತು. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ದೂರು ನೀಡಿದ್ದೇನೆ.
-ರಘು ವೆಂಕಟೇಗೌಡ, ಅಧ್ಯಕ್ಷ, ಆಸರೆ ಸೇವಾ ಟ್ರಸ್ಟ್, ಕೆ.ಎಂ.ದೊಡ್ಡಿಸಾದಿಕ್ ವಿರುದ್ಧ ಕೋಮುಗಲಭೆ ಮತ್ತು ದೇಶದ್ರೋಹ ಎಸಗಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ನ್ಯಾಯಾಲಯದ ವಶಕ್ಕೆ ನೀಡಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
-ಅಯ್ಯನಗೌಡ, ಸಬ್ ಇನ್ಸ್ ಪೆಕ್ಟರ್, ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ