ಕಾಡ್ಗಿಚ್ಚು ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಿ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್

Update: 2019-02-24 15:23 GMT

ಬೆಂಗಳೂರು, ಫೆ.24: ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡ್ಗಿಚ್ಚು ಪರಿಸರ ಪ್ರೇಮಿಗಳು ಮತ್ತು ನಾಡಿನ ಹಿತ ಚಿಂತಕರಲ್ಲಿ ಚಿಂತೆಗೀಡುಮಾಡಿದೆ. ಹೀಗಾಗಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಒತ್ತಾಯಿಸಿದ್ದಾರೆ. 

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಈಗಾಗಲೇ ಸಾವಿರಾರು ಎಕರೆ ಅರಣ್ಯ ಕಾಡ್ಗಿಚ್ಚಿಗೆ ಆಹುತಿಯಾಗಿದೆ. ಬೇಸಿಗೆ ಪ್ರಾರಂಭಕ್ಕೂ ಮೊದಲು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಡ್ಗಿಚ್ಚು ತಪ್ಪಿಸುವ ಯತ್ನ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಅದಕ್ಕೆ ತಿಲಾಂಜಲಿ ನೀಡಲಾಗಿದೆ. ಸಮ್ಮಿಶ್ರ ಸರಕಾರದಲ್ಲಿ ಅರಣ್ಯ ಪ್ರದೇಶಗಳ ಸಂರಕ್ಷಣೆಗೆ ಎಷ್ಟರ ಮಟ್ಟಿಗೆ ಒತ್ತು ನೀಡಲಾಗಿದೆ ಎಂಬುದು ಸಂಶಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಪ್ರತಿ ವರ್ಷ ಬೇಸಿಗೆಯಲ್ಲಿ ಕಾಡ್ಗಿಚ್ಚು ಸಾಮಾನ್ಯವಾಗಲು ಯಾರ ಕೈವಾಡವಿದೆ ಎನ್ನುವುದನ್ನು ರಾಜ್ಯ ಸರಕಾರ ಪತ್ತೆ ಮಾಡಬೇಕು. ಟಿಂಬರ್ ಮಾಫಿಯಾ ಈ ಕೃತ್ಯದ ಹಿಂದೆ ಇದೆಯೆ ಎನ್ನುವ ಅನುಮಾನಗಳು ಇವೆ. ಈಗಾಗಲೆ ಸಾವಿರಾರು ಎಕರೆ ಅರಣ್ಯ ನಾಶಕ್ಕೆ ಕಾರಣರಾಗಿರುವವರನ್ನು ಪತ್ತೆ ಮಾಡಲು ಸೂಕ್ತ ತನಿಖೆಗೆ ಆದೇಶಿಸಬೇಕೆಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News