ರಾಜ್ಯದಲ್ಲಿ ಇಸ್ರೇಲ್ ಮಾದರಿ ರೇಷ್ಮೆ ಕೃಷಿ ಅಳವಡಿಸಲು ಚಿಂತನೆ: ಸಚಿವ ಸಾ.ರಾ ಮಹೇಶ್
ಮೈಸೂರು,ಫೆ.24: ರೇಷ್ಮೆ ಉದ್ಯಮವನ್ನು ಮತ್ತಷ್ಟು ಹೆಚ್ಚಿಸಲು ಇಸ್ರೇಲ್ ಮಾದರಿಯ ರೇಷ್ಮೆ ಕೃಷಿ ಅಳವಡಿಸಲು ಚಿಂತಿಸಲಾಗಿದೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ ಮಹೇಶ್ ತಿಳಿಸಿದರು.
ನಗರದ ಬಂಡಿಪಾಳ್ಯದಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ರವಿವಾರ ರೇಷ್ಮೆ ಇಲಾಖೆ ಆರಂಭಿಸಿರುವ ನೂತನ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ರೇಷ್ಮೆ ಉದ್ಯಮ 12 ಲಕ್ಷ ಕುಟುಂಬಕ್ಕೆ ಜೀವನಾಧಾರವಾಗಿದ್ದು, ರೇಷ್ಮೆ ಬೆಳೆ ನಂಬಿರುವ ರೈತರ ಅಭಿವೃದ್ಧಿಗೆ 2 ಎಕರೆ ಜಾಗದಲ್ಲಿ ಉನ್ನತ ರೇಷ್ಮೆ ಮಾರುಕಟ್ಟೆ ಸ್ಥಾಪಿಸಲಾಗುವುದು ಎಂದು ಹೇಳಿದರು.
ರಾಜ್ಯದ ಆರ್ಥಿಕತೆಯಲ್ಲಿ ರೇಷ್ಮೆ ಮಹತ್ತರ ಪಾತ್ರವಹಿಸಿರುವುದರಿಂದ ಸರ್ಕಾರ ರೇಷ್ಮೆ ಉದ್ಯಮಕ್ಕೆ ಸಾಕಷ್ಟು ಸವಲತ್ತು ನೀಡಿದೆ. ರೇಷ್ಮೆಗೆ ಪ್ರಸಿದ್ಧವಾದ ಮೈಸೂರಿನ ಕೇಂದ್ರ ಭಾಗದಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿದ್ದೇವೆ. ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳ 36 ಸಾವಿರ ಬೆಳೆಗಾರರು ಹಾಗೂ 735 ವ್ಯಾಪಾರಗಾರರ ಕುಟುಂಬಗಳಿಗೆ ಮಾರುಕಟ್ಟೆ ಒದಗಿಸಲು ಮುಖ್ಯಮಂತ್ರಿಗಳಲ್ಲಿ ಪ್ರಸ್ತಾಪಿಸಿದಾಗ ಬಜೆಟ್‍ನಲ್ಲಿ ಘೋಷಣೆ ಮಾಡಿದರು ಎಂದು ತಿಳಿಸಿದರು.
ರೇಷ್ಮೆಗೂಡಿನ ಅಭಿವೃದ್ಧಿಗೆ ರಾಜ್ಯದಲ್ಲಿ 55 ಸರ್ಕಾರಿ ಮಾರುಕಟ್ಟೆ ನಿರ್ಮಿಸಲಾಗಿದ್ದು, ಈ ಪೈಕಿ 20 ಬಿತ್ತನೆಗೂಡು ಹಾಗೂ 35 ವಾಣಿಜ್ಯ ಮಾರುಕಟ್ಟೆಗಳಿವೆ. ರೇಷ್ಮೆ ಮಾರುಕಟ್ಟೆಯಲ್ಲಿ ಇ-ಹಣ ಪಾವತಿಯನ್ನು ರಾಮನಗರದಲ್ಲಿ ಮಾದರಿಯಾಗಿ ಈಗಾಗಲೇ ಪ್ರಾರಂಭಿಸಲಾಗಿದೆ. ಮೈಸೂರಿನಲ್ಲಿ ಕೆಎಸ್‍ಐಸಿಯೂ ಇರುವುದರಿಂದ ರಾಮನಗರ ಭಾಗದಿಂದ ತರುವ ಬದಲಿಗೆ ಇಲ್ಲಿಂದಲೇ ಇ-ಹಣ ಪಾವತಿಗೆ ಸಹಾಯಕವಾಗಲಿದೆ ಎಂದು ಹೇಳಿದರು.
ರಾಮನಗರ, ಚನ್ನಪಟ್ಟಣ, ಚಾಮರಾಜನಗರ ಭಾಗಗಳ ರೇಷ್ಮೆ ಬೆಳೆಗಾರರ ಸಬಲೀಕರಣಕ್ಕೆ ಪ್ರೋತ್ಸಾಹಧನ ನೀಡಲಾಗುವುದು. ರೈತರನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಈಗಾಗಲೇ ರೈತ ಸಾಲಮನ್ನಾದಂತಹ ಮಾದರಿ ಕಾರ್ಯಕ್ರಮ ನೀಡಿದೆ ಎಂದರು.
ರಾಜ್ಯದಲ್ಲಿ ರೇಷ್ಮೆ ಬೆಳೆಯನ್ನು ಹೆಚ್ಚಿಸಲು ಇಸ್ರೇಲ್ ಮಾದರಿಯ ರೇಷ್ಮೆ ಕೃಷಿಯನ್ನು ಅಳವಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಕಡಿಮೆ ಖರ್ಚಿನಲ್ಲಿ ಉತ್ತಮ ಫಸಲನ್ನು ಬೆಳೆದು ಉತ್ತಮ ಲಾಭಗಳಿಸಬಹುದು. ಅಂತಹ ವಾತಾವರಣನ್ನು ರಾಜ್ಯದ ರೈತರಿಗೆ ಸೃಷ್ಟಿ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಈ ಭಾಗದ ರೈತರು ಕೊಳ್ಳೇಗಾಲ ಅಥವಾ ರಾಮನಗರ ಮಾರುಕಟ್ಟೆಗೆ ಹೋಗಬೇಕಿತ್ತು. ಸದ್ಯಕ್ಕೆ ಮನೆ ಬಾಗಿಲಲ್ಲೇ ಮಾರುಕಟ್ಟೆ ಬಂದಿದೆ. ಮಳೆ ಬಾರದಿದ್ದರೂ ಕಡಿಮೆ ಮಳೆಯಲ್ಲೇ ಹೈನುಗಾರಿಕೆ ಮಾದರಿಯಲ್ಲಿ ರೇಷ್ಮೆ ಬೆಳೆಯಬಹುದಾಗಿದೆ ಎಂದರು.
ಮೇಯರ್ ಪುಷ್ಪಲತಾ ಜಗನ್ನಾಥ್, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಸದಸ್ಯರಾದ ಸೋಮಣ್ಣ, ರಮೇಶ್ ಮುದ್ದೇಗೌಡ, ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ಉಪಾಧ್ಯಕ್ಷ ಚಿಕ್ಕಜವರಯ್ಯ, ನಿರ್ದೇಶಕರಾದ ಆನಂದ್, ಸಿದ್ದೇಗೌಡ, ಕೋಟೆಹುಂಡಿ ಮಹದೇವು, ಪ್ರಕಾಶ್, ಸದಸ್ಯರಾದ ನಾಗರಾಜು, ರೇಷ್ಮೆ ಅಭಿವೃದ್ಧಿ ಆಯುಕ್ತ ಕೆ.ಎಸ್.ಮಂಜುನಾಥ್, ರೇಷ್ಮೆ ಅಪರ ನಿರ್ದೇಶಕಿ ಶಾಂತಲಾ, ಸುಮನ್ ಚಿನ್, ಕೆಎಸ್‍ಐಸಿ ಪ್ರಧಾನ ವ್ಯವಸ್ಥಾಪಕ ಕೃಷ್ಣಪ್ಪ, ಸಚಿವರ ಆಪ್ತ ಕಾರ್ಯದರ್ಶಿ ಶ್ರೀಧರ್‍ನಾಯಕ್, ಜಯರಾಂ, ಹನುಮೇಶ್ ಇನ್ನಿತರರು ಹಾಜರಿದ್ದರು.