ಬಿದಿರಿನ ಮರಗಳಿಗೆ ಆಕಸ್ಮಿಕ ಬೆಂಕಿ: ಎರಡು ಎಕರೆ ಪ್ರದೇಶ ಬೆಂಕಿಗಾಹುತಿ
ಮೈಸೂರು,ಫೆ.24: ಆಕಸ್ಮಿಕವಾಗಿ ಬಿದಿರಿನ ಮರಗಳಿಗೆ ಬೆಂಕಿ ತಗುಲಿದ ಪರಿಣಾಮ ಎರಡು ಎಕರೆ ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಹೆಬ್ಬಾಳಿನ ಕೈಗಾರಿಕಾ ಪ್ರದೇಶದಲ್ಲಿರುವ ಪ್ರೀತಿ ಗ್ಯಾನೈಟ್ ಸಮೀಪದ ಎಚ್.ಪಿ.ಗ್ಯಾಸ್ ತೋಟದ ಮೈದಾನದಲ್ಲಿ ಬಿದಿರಿನ ಮರಗಳಿಗೆ ಬೆಂಕಿ ತಗುಲಿದ ಪರಿಣಾಮ ಅದರ ಸಮೀಪವಿದ್ದ ತೆಂಗಿನ ಮರಕ್ಕೂ ಬೆಂಕಿಯ ಕೆನ್ನಾಲಿಗೆ ಹಬ್ಬಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬನ್ನಿಮಂಟಪದ ಅಗ್ನಿಶಾಮಕ ದಳದ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಮತ್ತೊಂದೆಡೆ, ಮೈಸೂರಿನ ಆಶೋಕಪುರಂ ರೈಲ್ವೆ ಸ್ಟೇಷನ್ ಬಳಿಯ ರೈಲ್ವೆ ವರ್ಕ್ ಶಾಪ್ ಬಳಿ ಗೂಡ್ಸ್ ತುಂಬಿದ್ದ ಮಳಿಗೆಯೊಂದಕ್ಕೆ ಆಕಸ್ಮಿಕ ಬೆಂಕಿ ಬಿದ್ದು, ವಸ್ತುಗಳೆಲ್ಲಾ ಸುಟ್ಟುಹೋಗಿರುವ ಘಟನೆ ನಡೆದಿದೆ.
ರೈಲ್ವೆ ವರ್ಕ್‍ಶಾಪ್ ಬಳಿ ಹಳೆಯ ವಸ್ತುಗಳನ್ನು ತುಂಬಿದ್ದ ಮಳಿಗೆಯೊಂದರಲ್ಲಿ ರವಿವಾರ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಲ್ಲಿದ್ದ ವಸ್ತುಗಳೆಲ್ಲಾ ಸುಟ್ಟುಹೋಗಿವೆ. ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.