ಎಲ್ಲಾ ರಂಗಗಳಲ್ಲಿಯೂ ಕೇಂದ್ರ ಸರ್ಕಾರ ವಿಫಲ: ಸಚಿವ ಯು.ಟಿ.ಖಾದರ್

Update: 2019-02-24 16:06 GMT

ಶಿವಮೊಗ್ಗ, ಫೆ. 24: ಭವಿಷ್ಯದ ಭಾರತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೊಡುಗೆ ಏನೂ ಇಲ್ಲ. ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದ್ದು, ಈ ಸರ್ಕಾರದ ಅವಧಿಯಲ್ಲಿ ಇನ್ನಿಲ್ಲದ ಸಂಕಷ್ಟವನ್ನು ದೇಶದ ನಾಗರಿಕರು ಎದುರಿಸುವಂತಾಗಿದೆ ಎಂದು ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ವಾಗ್ದಾಳಿ ನಡೆಸಿದರು.

ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ದೇಶವಾಸಿಗಳಿಗೆ ನೀಡಿದ ಭರವಸೆ ಈಡೇರಿಸಿಲ್ಲ. ಪೊಳ್ಳು ಆಶ್ವಾಸನೆ ನೀಡುವಲ್ಲಿಯೇ ಕಾಲಹರಣ ಮಾಡಿದರು. ಕನಿಷ್ಟ ನಾಗರಿಕರ ಹಿತಾಸಕ್ತಿ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವಲ್ಲಿಯೂ ಸೋತರು ಎಂದು ಟೀಕಾಪ್ರಹಾರ ನಡೆಸಿದರು.

ಕೇಂದ್ರ ಸರ್ಕಾರದ ಅವೈಜ್ಞಾನಿಕ, ಜನವಿರೋಧಿ ನೀತಿಗಳಿಂದ ಆರ್ಥಿಕ ರಂಗ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರುವಂತಾಯಿತು. ಜನಸಾಮಾನ್ಯರು ತತ್ತರಿಸುವಂತಾಯಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಕೂಡ ದಿಢೀರ್ ರಾಜೀನಾಮೆ ನೀಡಿದರು. ಸಿಬಿಐ ಸಂಸ್ಥೆಯಲ್ಲಿಯೂ ದೊಡ್ಡ ಗೊಂದಲವೇ ಸೃಷ್ಟಿಯಾಯಿತು. ಇದು ಕೇಂದ್ರದ ದುರಾಡಳಿತಕ್ಕೆ ನಿದರ್ಶನಗಳಾಗಿವೆ ಎಂದು ದೂರಿದರು.

ಅಸ್ಥಿರಕ್ಕೆ ಯತ್ನ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾರ್ಗದರ್ಶನದಲ್ಲಿಯೇ, ರಾಜ್ಯ ಬಿಜೆಪಿ ಮುಖಂಡರು ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ನಿರಂತರ ಪ್ರಯತ್ನ ನಡೆಸಿಕೊಂಡು ಬಂದಿದ್ದಾರೆ. ಆದರೆ ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ಬಿಜೆಪಿಯ ಯಾವುದೇ ಕಾರ್ಯತಂತ್ರಗಳು ಫಲ ನೀಡುವುದಿಲ್ಲ ಎಂದರು.

ರಾಜ್ಯ ಸರ್ಕಾರವು ಜನಪರವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಆದರೆ ಬಿಜೆಪಿ ಪಕ್ಷವು ಅಧಿಕಾರದ ಹಪಾಹಪಿಯಿಂದ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿದೆ. ಹೇಗಾದರೂ ಮಾಡಿ ಸರ್ಕಾರ ಅಸ್ಥಿರಗೊಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ ಇದು ಫಲ ನೀಡುವುದಿಲ್ಲವಾಗಿದೆ ಎಂದು ತಿಳಿಸಿದರು.

ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಕಲ ಪೂರ್ವಭಾವಿ ಸಿದ್ದತೆ ಮಾಡಿಕೊಳ್ಳಲಾರಂಭಿಸಿದೆ. ಜೆಡಿಎಸ್ ಜೊತೆ ಹೊಂದಾಣಿಕೆ ಹಾಗೂ ಸೀಟು ಹಂಚಿಕೆ ಕುರಿತಂತೆ, ಪಕ್ಷದ ವರಿಷ್ಠರು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಅಭಿವೃದ್ದಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗ ರಾಜ್ಯಕ್ಕೆ ಮಾದರಿಯಾಗಲಿದೆ. ಕೇಂದ್ರ ಸರಕಾರದಿಂದ 100 ಕೋಟಿ ರೂ. ಅನುದಾನ ಬಂದಿದ್ದು, ರಾಜ್ಯ ಸರಕಾರ 100 ಕೋಟಿ ರೂ. ಬಿಡುಗಡೆ ಮಾಡಿದೆ. ತ್ವರಿತ ಗತಿಯಲ್ಲಿ ಕಾಮಗಾರಿ ಪ್ರಾರಂಭವಾಗಿವೆ. ಸ್ಮಾರ್ಟ್ ಸಿಟಿಗೆ ಅವಶ್ಯಕತೆಯಿದ್ದರೆ ಪ್ರತ್ಯೇಕ ಎಮ್.ಡಿ ನೇಮಕ ಮಾಡಲಾಗುವುದು. ಸದ್ಯ ಪಾಲಿಕೆ ಆಯುಕ್ತರೇ ಎರಡೂ ಕೆಲಸ ಮಾಡುತ್ತಿದ್ದಾರೆ. ತ್ವರಿತಗತಿಯಲ್ಲಿ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಚಿವ ಯು.ಟಿ ಖಾದರ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News