ಶಿವಮೊಗ್ಗ ನಗರ ಅಭಿವೃದ್ಧಿಗೆ ಹೆಚ್ಚುವರಿ 10 ಕೋಟಿ ರೂ. ಅನುದಾನ : ಸಚಿವ ಯು.ಟಿ.ಖಾದರ್

Update: 2019-02-24 16:08 GMT

ಶಿವಮೊಗ್ಗ, ಫೆ. 24: ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ನಗರದ ಅಭಿವೃದ್ಧಿಗೆ ಹೆಚ್ಚುವರಿಯಾಗಿ 10 ಕೋಟಿ ರೂ. ಒದಗಿಸಲು ಪ್ರಯತ್ನಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ತಿಳಿಸಿದರು.

ಅವರು ಭಾನುವಾರ ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಸುಮಾರು 400 ಕೋಟಿ ರೂ. ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ನಗರದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವ ಅಗತ್ಯವಿದೆ. ಬೇರೆಯವರ ಹಸ್ತಕ್ಷೇಪವಿಲ್ಲದೆ ಇಲ್ಲಿನ ಉದ್ಯಮಿಗಳಿಂದ ಬಂಡವಾಳ ಹಾಕಿಸಿ ನಗರವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಬೇಕು. ಶಿವಮೊಗ್ಗ ಅಭಿವೃದ್ಧಿಯಲ್ಲಿ ರಾಷ್ಟ್ರಕ್ಕೆ ಮದರಿಯಾಗಬೇಕು. ಸ್ಮಾರ್ಟ್ ಸಿಟಿ ಯೋಜನೆಯ ಉದ್ದೇಶ ಸಾರ್ವಜನಿಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವುದಾಗಿದೆ. ಈ ಕಾಮಗಾರಿಗಳಿಗೆ ಇಲಾಖೆಯಿಂದ ಹೆಚ್ಚುವರಿ 10 ಕೋಟಿ ಹಣವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.

ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಮೂಲಸೌಲಭ್ಯ ಕಲ್ಪಿಸಲು ಹೆಚ್ಚುವರಿ ಅನುದಾನ ಒದಗಿಸುವ ಅಗತ್ಯವಿದ್ದು, ಸರ್ಕಾರ ಇದಕ್ಕಾಗಿ 25 ಕೋಟಿ ರೂ. ಬಿಡುಗಡೆ ಮಾಡಬೇಕು. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಮವೆಚ್ಚದ ಯೋಜನೆ ಇದಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆ ಅನುಷ್ಟಾನದಲ್ಲಿ ಶಿವಮೊಗ್ಗ ನಗರ ಮುಂದಿದೆ ಎಂದರು. ಕಾಮಗಾರಿಗಳಲ್ಲಿ ಲೋಪದೋಷ ಕಂಡು ಬಂದಲ್ಲಿ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ಎಸ್.ಪಿ ಶೇಷಾದ್ರಿ, ಜಿಲ್ಲಾಧಿಕಾರಿ ಕೆ.ಎ ದಯಾನಂದ್, ಮಹಾನಗರ ಪಾಲಿಕೆ ಆಯುಕ್ತೆ ಚಾರುಲತ ಸೋಮಲ್ ಮುಂತಾದ ಗಣ್ಯರು ಹಾಜರಿದ್ದರು.

ಶಂಕುಸ್ಥಾಪನೆ: ಸಚಿವರ ಈ ಸಂದರ್ಭದಲ್ಲಿ ಗಾಂಧಿನಗರ ಮುಖ್ಯರಸ್ತೆ ಅಟೋ ನಿಲ್ದಾಣ ವೃತ್ತದಲ್ಲಿ ರಸ್ತೆಗಳ ಅಭಿವೃದ್ಧಿ, ಗಾಂಧಿನಗರ ಪಾರ್ಕ್ ಅಭಿವೃದ್ಧಿ, ರವೀಂದ್ರ ನಗರ, ಚನ್ನಪ್ಪ ಲೇಔಟ್‍ನಲ್ಲಿರುವ ಕನ್ಸರ್ವೆನ್ಸಿಗಳ ಅಭಿವೃದ್ಧಿ ಹಾಗೂ ತುಂಗಾ ನಾಲೆಯ ದಂಡೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಇದೇ ರೀತಿ ವೀಣಾ ಶಾರದ ಶಾಲೆ ವೃತ್ತ, ಹೊಸಮನೆ, ಬಸವನಗುಡಿ ಮುಖ್ಯರಸ್ತೆ, ಜಯದೇವ ವೃತ್ತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News