×
Ad

ಸುಳ್ಳನ್ನೇ ಹೇಳಿಕೊಂಡು ಕಾಲಹರಣ ಮಾಡುತ್ತಿರುವ ಮೋದಿ: ಕೆಪಿಸಿಸಿ ಮುಖಂಡ ಮೋಹನ್‍ ರಾವ್

Update: 2019-02-24 21:55 IST

ಮಂಡ್ಯ, ಫೆ.24: ಮೋದಿಯವರು ಸುಳ್ಳನ್ನೇ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿರುವ ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯಾಧ್ಯಕ್ಷ ಮೋಹನ್‍ ರಾವ್, ಕಾಂಗ್ರೆಸ್ ಸರಕಾರದಲ್ಲಿ ಕಾರ್ಮಿಕರಿಗೆ ನೀಡಿದ ಯೋಜನೆಗಳನ್ನು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಮಿಕದ ವಿಭಾಗದ ಸದಸ್ಯರು ಪ್ರತಿಯೊಂದು ಮನೆಗೆ ಭೇಟಿ ನೀಡಿ ಮನದಟ್ಟು ಮಾಡಿಕೊಡಬೇಕೆಂದು ಕರೆ ನೀಡಿದಾರೆ.

ನಗರದ ಬಂದೀಗೌಡ ಬಡಾವಣೆಯ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಜಿಲ್ಲಾ ಕಾರ್ಮಿಕ ವಿಭಾಗದ ವತಿಯಿಂದ ಜಿಲ್ಲಾ ಮಟ್ಟದ ಕಾರ್ಮಿಕರ ವಿಭಾಗದ ಸಮಾವೇಶ ಹಾಗೂ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಮತದಾರರಲ್ಲಿ ಜಾಗೃತಿ ಮೂಡಿಸಲು ಕಾರ್ಮಿಕ ವಿಭಾಗ ಪ್ರತಿಯೊಂದು ಜಿಲ್ಲೆಯಲ್ಲಿ ಸಮಾವೇಶಗಳನ್ನು ಆಯೋಜಿಸುತ್ತಾ ಬರುತ್ತಿದೆ. ಭಾರತ ದೇಶ ಕಾರ್ಮಿಕರನ್ನು ಅವಲಂಬಿತವಾಗಿದ್ದು, ಶೇ.70ರಷ್ಟು ದುಡಿಮೆ ಮಾಡುತ್ತಿರುವ ಕಾರ್ಮಿಕರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕೇಂದ್ರದ ಬಿಜೆಪಿ ಸರಕಾರ ಅವಕಾಶ ನೀಡುತ್ತಿಲ್ಲ ಎಂದರು.

ಕಾರ್ಮಿಕ ಶಕ್ತಿ, ಯುವಶಕ್ತಿ, ಸ್ತ್ರೀಶಕ್ತಿ ಮುಂದೆ ಬರಬೇಕು. ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿದರೆ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಅಪಘಾತ ವಿಮೆ ಮತ್ತಿತರ ಸೌಲಭ್ಯಗಳನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿತ್ತು. ಈ ಸೌಲಭ್ಯಗಳನ್ನು ಜನರಿಗೆ ಮುಟ್ಟಿಸಬೇಕು ಎಂದು ಹೇಳಿದರು.

ಮಂಡ್ಯ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾ ಅಧ್ಯಕ್ಷರಾಗಿ ಕಮಲಾರಾಜು, ಉಪಾಧ್ಯಕ್ಷರಾಗಿ ಮಮತಾ, ಆಟೋ ಚಾಲಕರ ಸಂಘದ ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾ ಅಧ್ಯಕ್ಷರಾಗಿ ಸಯ್ಯದ್ ಮುಜಾಮಿಲ್ ಅವರು ಪದಗ್ರಹಣ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ನಗರಸಭೆ ಕಾಂಗ್ರೆಸ್ ಸದಸ್ಯರಿಗೆ ಸನ್ಮಾನಿಸಲಾಯಿತು. 

ಮುಖಂಡ ರವಿಕುಮಾರ್ ಗಣಿಗ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಕೆ.ಎಂ.ರಾಮಕೃಷ್ಣ, ಮುಖಂಡರಾದ ಸಿದ್ದರಾಮೇಗೌಡ, ಹಾಲಹಳ್ಳಿ ರಾಮಲಿಂಗಯ್ಯ, ಸತ್ಯನಾರಾಯಣ್, ಸುಬ್ರಹ್ಮಣ್ಯನಾಯ್ಡು, ಸುನೀತಾ, ಸಿ.ಎಂ.ದ್ಯಾವಪ್ಪ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News