ಸಂಕಷ್ಟಕ್ಕೆ ಸಿಲುಕಿರುವ ಭೋವಿ ಜನಾಂಗದ ಪರ ದೃಢ ನಿರ್ಧಾರ: ಸಚಿವ ಸಿ.ಎಸ್ ಪುಟ್ಟರಾಜು

Update: 2019-02-24 16:30 GMT

ಮಂಡ್ಯ, ಫೆ.24: ಕೆಆರ್‍ಎಸ್ ಅಣೆಕಟ್ಟೆ ಭದ್ರತೆಗೆ ಅಪಾಯವಾಗಲಿದೆ ಎಂಬ ಕಾರಣಕ್ಕೆ ಗಣಿಗಾರಿಕೆ ನಿಷೇಧಿಸಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಭೋವಿ ಜನಾಂಗದ ಪರವಾಗಿ ದೃಢ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದ್ದಾರೆ.

ನಗರದ ಕಲಾಮಂದಿರದಲ್ಲಿ ಜಿ ಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಭಾರತೀಯ ಭೋವಿ(ಓಡ್)(ಓ.ಸಿ.ಸಿ.ಐ) ಜನಾಂಗದ ಪರಿಷತ್ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ 847ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಆರ್‍ಎಸ್ ಅಣೆಕಟ್ಟೆ ಕಟ್ಟಲು ಹೊರ ರಾಜ್ಯಗಳಿಂದ ಆಗಮಿಸಿದ ಭೋವಿ ಜನಾಂಗದ ಕೆಲಸಗಾರರು ನಂತರದ ದಿನಗಳಲ್ಲಿ ನಮ್ಮ ಒಡನಾಡಿಗಳಾಗಿ ಜೀವಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಶೇ.70ರಷ್ಟು ಗಣಿಗಾರಿಕೆ ಕೆಲಸದಲ್ಲಿ ತೊಡಗಿದ್ದ ಭೋವಿ ಜನಾಂಗ ಗಣಿಗಾರಿಕೆ ನಿಷೇಧದಿಂದ ಜೀವನ ನಿರ್ವಹಣೆ ಮಾಡಲಾಗದೆ ಕಂಗಾಲಾಗಿದೆ. ಹೀಗಾಗಿ ಪಾಂಡವಪುರ ತಾಲೂಕಿನ ಚಿನಕುರುಳಿ, ಹೊನಗಾನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋರೆ ಟೆಂಡರ್ ಗಳನ್ನು ಭೋವಿ ಜನಾಂಗಕ್ಕೆ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಿದ್ದೇನೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶ್ರಮ ಜೀವಿಗಳಾದ ಭೋವಿ ಸಮುದಾಯದ ಬಗ್ಗೆ ಅತ್ಯಂತ ಗೌರವ ಹೊಂದಿದ್ದಾರೆ. ಜನಾಂಗವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬದ್ಧತೆ ಸಮ್ಮಿಶ್ರ ಸರಕಾರಕ್ಕಿದೆ. ಈ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ  ಮತ್ತು ಸಮುದಾಯದ ಮುಖಂಡರು ಸಭೆ ಏರ್ಪಡಿಸುವ ಜವಾಬ್ದಾರಿ ನನ್ನದು ಎಂದು ಹೇಳಿದರು.

ಮಳವಳ್ಳಿ ಶಾಸಕ ಎಂ.ಡಾ.ಕೆ.ಅನ್ನದಾನಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಕೃತಿ, ಸಂಸ್ಕಾರ ಬೆಳೆಸಿಕೊಂಡರಷ್ಟೇ ಸಮುದಾಯಗಳು ಅಭಿವೃದ್ಧಿಯಾಗಲಿವೆ. ಭೋವಿ ಜನಾಂಗ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದು ಹೇಳಿದರು.

ಕೆಲ ಬಿಜೆಪಿ ನಾಯಕರು ಇಡೀ ವಿಶ್ವವೇ ಒಪ್ಪಿರುವ ಭಾರತದ ಹೆಮ್ಮೆಯ ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನಾಡಿದ್ದಾರೆ. ಪರಿಶಿಷ್ಟ ವರ್ಗಗಳ ಪರವಷ್ಟೇ ಸಂವಿಧಾನವಿದೆ ಎಂದು ಆರೋಪಿಸುತ್ತಾರೆ. ಅಲ್ಲದೇ, ಹಿಂದುಳಿದ ವರ್ಗಗಳ ಒಗ್ಗಟ್ಟು ಹೊಡೆದು ಹಾಕಲು ಹವಣಿಸುತ್ತಿದ್ದಾರೆ. ಇಂತಹ ಕಾರ್ಯಗಳು ನಡೆಯದಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಭಾರತೀಯ ಭೋವಿ(ಓಡ್)(ಓಸಿಸಿಐ) ಜನಾಂಗದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಅಲಂಕೃತ ಭಾವಚಿತ್ರದ ಮೆರವಣಿಗೆ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಲಾಮಂದಿರದಲ್ಲಿ ಸಮಾವೇಶಗೊಂಡಿತು. ಕಾರ್ಯಕ್ರಮದಲ್ಲಿ ಮಹಿಳಾ ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಸಂಯೋಜಕ ಡಾ.ಎ.ಆರ್.ಮದನ್‍ ಕುಮಾರ್ ಉಪನ್ಯಾಸ ನೀಡಿದರು. 

ಚಿತ್ರದುರ್ಗ ಭೋವಿ ಗುರಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಳವಳ್ಳಿ ತಾಲೂಕಿನ ಶ್ರೀ ಸಿದ್ದರಾಮೇಶ್ವರ ಪುಣ್ಯಪೀಠದ ಮಾದೇಶ ಗುರೂಜಿ, ಓಸಿಸಿಐ ರಾಷ್ಟ್ರೀಯ ಅಧ್ಯಕ್ಷ ಶಂಕರ್‍ಲಾಲ್, ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಚ್.ರವಿ ಮಾಕಳಿ, ರಾಷ್ಟ್ರೀಯ ಉಪಾಧ್ಯಕ್ಷ ಎಂ.ಮುನಿಮಾರಪ್ಪ, ಜಿಲ್ಲಾಧ್ಯಕ್ಷ ಟಿ.ಸಿ.ಗುರಪ್ಪ, ಕಿರಣ್‍ಕುಮಾರ್, ನಾಗಮಹದೇವು, ನಗರಸಭೆ ಸದಸ್ಯೆ ಲಲಿತಾ, ಟಿ.ನಾಗರಾಜು, ಶಿವಕುಮಾರ್, ಪಳನಿಸ್ವಾಮಿ, ಪಾಪಾಬೋವಿ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News