ದಲಿತನೆಂದು ನನಗೂ ಮೂರು ಬಾರಿ ಸಿಎಂ ಪಟ್ಟ ತಪ್ಪಿಸಲಾಗಿತ್ತು: ಡಿಸಿಎಂ ಪರಮೇಶ್ವರ್

Update: 2019-02-24 17:30 GMT

ದಾವಣಗೆರೆ, ಫೆ.24: ಸಂಘಟನೆ ಕೊರತೆಯಿಂದ ದಿ.ಬಿ.ಬಸವಲಿಂಗಪ್ಪ, ಕೆ.ಎಚ್. ರಂಗನಾಥ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ನನಗೂ ಮೂರು ಬಾರಿ ಮುಖ್ಯಮಂತ್ರಿ ಪಟ್ಟ ತಪ್ಪಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಶಿವಯೋಗಿ ಮಂದಿರದಲ್ಲಿ ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಮತ್ತು ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು. ಯಾರೊಬ್ಬರೂ ದಲಿತ, ಶೋಷಿತ ಎಂದು ಹೇಳಿಕೊಳ್ಳಲು ಹಿಂಜರಿಯಬಾರದು. ದೇವಸ್ಥಾನ, ಚೌಕ್ಷ ಅಂಗಡಿಯಲ್ಲಿ ನಮ್ಮನ್ನು ಬಿಟ್ಟುಕೊಳ್ಳುತ್ತಿಲ್ಲ. ಇದನ್ನು ನೋಡಿದರೆ ಕೆಳಸ್ತರದಲ್ಲೇ ಇದ್ದೇವೆ ಅನ್ನುವುದನ್ನು ಮರೆಯಬಾರದು. ಇದು ತಪ್ಪಬೇಕಾದರೆ ಹೋರಾಟದ ಹಾದಿ ಮೈಗೂಡಿಸಿಕೊಳ್ಳಬೇಕು. ದಾರಿ ಬದಲಾದರೆ ಇತಿಹಾಸ ಕ್ಷಮಿಸುವುದಿಲ್ಲ. ಮುಂದಿನ ಪೀಳಿಗೆ ನಮ್ಮನ್ನು ದೋಷಿಸುತ್ತದೆ. ಹೀಗಾಗಿ, ಸಂಘಟಿತರಾಗುವ ಮೂಲಕ ನಮ್ಮ ಹಕ್ಕುಗಳಿಗೆ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ದಾವಣಗೆರೆ ಜಿಲ್ಲೆಯಲ್ಲಿ ಛಲವಾದಿ ಮಹಾಸಭಾಕ್ಕೆ 5 ಎಕರೆ ಭೂಮಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ದೊಡ್ಡದಾದ ಕಂಚಿನ ಪ್ರತಿಮೆ ನಿರ್ಮಾಣ, ವಿದ್ಯಾರ್ಥಿ ನಿಲಯಕ್ಕೆ 5 ಕೋಟಿ ರೂ. ಹಣ ಸೇರಿದಂತೆ ವಿವಿಧ ಬೇಡಿಕೆ ಸಲ್ಲಿಸಿದ್ದು, ಈ ಕುರಿತು ಸರಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುವುದೆಂದು ಭರವಸೆ ನೀಡಿದರು.

ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ನೆಹರೂ ಚ.ಓಲೇಕಾರ್, ರಾಮಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಟಿ. ಉಮೇಶ್, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಎಫ್.ಎಚ್.ಜಕ್ಕಪ್ಪ, ಎಸ್.ಶೇಖರಪ್ಪ, ಸಂಜಯ್ ದೊಡ್ಡಮನಿ, ರುದ್ರಮುನಿ, ಶಂಕರ್, ಜೈಪ್ರಕಾಶ್, ಕೆ.ಎಸ್.ಬಸವಂತಪ್ಪ, ಸಿ.ಜಯಪ್ಪ, ಗಂಗಮ್ಮ ಮತ್ತಿತರರು ಉಪಸ್ಥಿತರಿದ್ದರು. ಜ್ಯೋತಿ ನಿರೂಪಿಸಿದರು. ಓಂಕಾರಪ್ಪ ಸ್ವಾಗತಿಸಿದರು. ಪಿಚ್ಚಳಿ ಶ್ರೀನಿವಾಸ್ ಪ್ರಾರ್ಥಿಸಿದರು.

‘ಕೇಂದ್ರದಿಂದ ಜಾತಿ ನಿಂದನೆ ಕಾನೂನು ದುರ್ಬಲಗೊಳಿಸುವ ಯತ್ನ’
ಸಮಾಜದಲ್ಲಿ ಸರ್ವರಿಗೂ ಸಮಾನತೆ ಕಲ್ಪಿಸುವ ತತ್ವಗಳನ್ನು ಹೊಂದಿರುವ ಸಂವಿಧಾನವನ್ನೇ ಸುಟ್ಟು ಹಾಕುವ, ತಿದ್ದುಪಡಿ ತರುವ ಕೆಟ್ಟ ಕಾರ್ಯಕ್ಕೆ ಕೆಲವರು ಮುಂದಾಗಿರುವುದು ಶೋಚನೀಯ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಾತಿ ನಿಂದನೆ ಕಾನೂನನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವುದು ದುರಂತವೇ ಸರಿ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News