ಸಾಲಮನ್ನಾ ವಿಚಾರದಲ್ಲಿ ರೈತರು ಆತಂಕಪಡುವ ಅಗತ್ಯವಿಲ್ಲ: ಸಚಿವ ಕಾಶೆಂಪೂರ್

Update: 2019-02-25 12:35 GMT

ಬೆಂಗಳೂರು, ಫೆ. 25: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಘೋಷಿಸಿದಂತೆ ಬೆಳೆ ಸಾಲಮನ್ನಾಕ್ಕೆ ಸಹಕಾರಿ ವಲಯದ 2.19 ಲಕ್ಷ ರೈತರಿಗೆ 1,088.90 ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರ ಜನವರಿಗೆ ಸಾಲ ಉಳಿಸಿಕೊಂಡ 3.87 ಲಕ್ಷ ರೈತರನ್ನು ಗುರುತಿಸಿದ್ದು, ಅವರ ಒಟ್ಟು 1,796 ಕೋಟಿ ರೂ.ಗಳಾಗಿದ್ದು, ಆ ಪೈಕಿ 1,088 ರೂ.ಮನ್ನಾ ಮಾಡಲಾಗಿದೆ. ಇದುವರೆಗೂ ಸಾಲಮನ್ನಾಕ್ಕೆ ಆರ್ಥಿಕ ಇಲಾಖೆಯಿಂದ 2,600 ಕೋಟಿ ರೂ. ಬಿಡುಗಡೆಯಾಗಿದ್ದು, ಇನ್ನೂ 1,500 ಕೋಟಿ ರೂ.ಬರಬೇಕಿದೆ. ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದ ರೈತರು ಸಾಲಮನ್ನಾ ವಿಚಾರದಲ್ಲಿ ಆತಂಕಪಡಬೇಕಿಲ್ಲ ಎಂದು ಅಭಯ ನೀಡಿದರು.

22.38 ಲಕ್ಷ ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದು, 18.71ಲಕ್ಷ ರೈತರು ಸಾಲಮನ್ನಾ ವ್ಯಾಪ್ತಿಯಲ್ಲಿದ್ದಾರೆ. ರೈತರ 1ಲಕ್ಷ ರೂ.ವರೆಗೆ ಸಾಲಮನ್ನಾ ಆಗಿದೆ ಎಂದ ಅವರು, ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡುವ ವ್ಯವಸ್ಥೆ ದೇಶದಲ್ಲೇ ಪ್ರಥಮ ಬಾರಿಗೆ ಜಾರಿ ಮಾಡಿದ್ದೇವೆ ಎಂದರು.

15.5 ಲಕ್ಷ ರೈತರ ಮಾಹಿತಿ ರಾಷ್ಟ್ರೀಯ ಬ್ಯಾಂಕ್‌ಗಳಿಂದ ಬಂದಿದೆ. ರೈತರ ಸಾಲ ಮನ್ನಾ ಪ್ರಕ್ರಿಯೆ ಚಾಲ್ತಿಯಲ್ಲಿದೆ. 2 ಲಕ್ಷ ರೈತರ 843 ಕೋಟಿ ರೂ.ಸಾಲಮನ್ನಾವಾಗಿದೆ. ಅಲ್ಲದೆ, 5 ಲಕ್ಷ ರೈತರ ಮಾಹಿತಿ ಸರಿಯಾಗಿದ್ದು, ಅವರ ಖಾತೆಗಳಿಗೆ 1,300 ಕೋಟಿ ರೂ.ಗಳನ್ನು ಇನ್ನು 5 ದಿನಗಳಲ್ಲಿ ಜಮಾ ಮಾಡಲಾಗುವುದು ಎಂದು ವಿವರಿಸಿದರು.

ಬೀದಿ ವ್ಯಾಪಾರಿಗಳಿಗೆ 10 ಕೋಟಿ ರೂ.ಸಾಲ: 18,021 ಮಂದಿ ಬೀದಿ ವ್ಯಾಪಾರಿಗಳಿಗೆ ‘ಬಡವರ ಬಂಧು ಯೋಜನೆ’ಯಡಿ 10.32 ಕೋಟಿ ರೂ.ಸಾಲ ನೀಡಿದ್ದೇವೆ. ಮಾರ್ಚ್ ಅಂತ್ಯಕ್ಕೆ 53 ಸಾವಿರ ಬೀದಿ ವ್ಯಾಪಾರಿಗಳಿಗೆ ಸಾಲ ವಿತರಿಸುವ ಗುರಿ ಇದೆ. ಮುಂದಿನ ದಿನಗಳಲ್ಲಿ 4.5 ಲಕ್ಷ ಬೀದಿ ವ್ಯಾಪಾರಿಗಳಿಗೆ ಶೂನ್ಯಬಡ್ಡಿ ದರದಲ್ಲಿ ಸಾಲ ವಿತರಿಸಲಾಗುವುದು ಎಂದರು.

‘ಕಾಯಕ’ ಯೋಜನೆಯಡಿ 212 ಸ್ವ ಸಹಾಯ ಗುಂಪುಗಳಿಗೆ 11.36 ಕೋಟಿ ರೂ.ಸಾಲ ನೀಡಿದ್ದು, ಸ್ವಯಂ ಉದ್ಯೋಗ ಕೈಗೊಳ್ಳುವ ಗುಂಪುಗಳಿಗೆ 10 ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು. ಆ ಪೈಕಿ 5 ಲಕ್ಷ ರೂ.ಶೂನ್ಯಬಡ್ಡಿ ದರ ಮತ್ತು ಉಳಿದ 5ರಿಂದ 10ಲಕ್ಷ ರೂ.ವರೆಗೆ ಶೇ.4ರ ಬಡ್ಡಿ ದರದಲ್ಲಿ ನೀಡಲಾಗುವುದು ಎಂದರು.

ಬೆಂಬಲ ಬೆಲೆ ಮೊದಲೇ ನಿಗದಿ: ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಒದಗಿಸುವ ‘ರೈತ ಕಣಜ’ ಯೋಜನೆಯಡಿ ಮುಂದಿನ ವರ್ಷದಿಂದ ಕೇಂದ್ರ ಸರಕಾರದ ತೀರ್ಮಾನಕ್ಕೆ ಕಾಯದೆ ಬೆಂಬಲ ಬೆಲೆ ಮೊದಲೇ ನಿಗಡಿಪಡಿಸಲಾಗುವುದು ಎಂದು ಹೇಳಿದರು.

‘ವಿಪಕ್ಷಗಳು ಹೇಳಿದಂತೆ ನಾವು ರೈತರಿಗೆ ಲಾಲಿಪಪ್ ಅನ್ನು ನೀಡಿಲ್ಲ. ಬದಲಿಗೆ ರೈತರ 1ಲಕ್ಷ ರೂ.ವರೆಗಿನ ಸಾಲಮನ್ನಾ ಮಾಡಿದ್ದೇವೆ. 2019ರ ಜೂನ್ ವೇಳೆಗೆ ಸಹಕಾರ ಸಂಸ್ಥೆಗಳಲ್ಲಿ ಸಾಲಮನ್ನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು’

-ಬಂಡೆಪ್ಪ ಕಾಶೆಂಪೂರ್, ಸಹಕಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News