ಆಟೊ ಬಾಡಿಗೆಗೆ ಕರೆದು ಚಾಲಕನಿಗೆ ಚೂರಿ ಇರಿತ: ಆರೋಪಿ ಬಂಧನ
ಜಯಪುರ, ಫೆ.25: ಪಟ್ಟಣದ ಠಾಣಾ ವ್ಯಾಪ್ತಿಯ ಕಟ್ಟೆಮನೆ ಸಮೀಪದ ಮಕ್ಕಿಮನೆಯಲ್ಲಿ ವ್ಯಕ್ತಿಯೊಬ್ಬ ಆಟೊ ಚಾಲಕರೊಬ್ಬರಿಗೆ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಗಾಯಗೊಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ತಲೆ ಮರಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಜಯಪುರದ ಮಕ್ಕಿಮನೆಯ ಚಂದ್ರು ಎಂಬವರ ಮಗ ದಿನೇಶ್, ಶನಿವಾರ ರಾತ್ರಿ ಹತ್ತು ಗಂಟೆಗೆ ಕೊಪ್ಪ ಪಟ್ಟಣದಿಂದ ಮಕ್ಕಿಮನೆಗೆ ತೆರಳಲು ಹರೀಶ್ ಎಂಬವರ ಆಟೊವನ್ನು ಬಾಡಿಗೆಗೆಂದು ಕರೆದು ಆಟೊದಲ್ಲಿಯೇ ದಿನೇಶ್ ಮಕ್ಕಿಮನೆ ಎಂಬಲ್ಲಿಗೆ ಬಂದಿದ್ದ. ಈ ವೇಳೆ ತನ್ನ ನಿವಾಸದ ಬಳಿ ಆಟೊ ಚಾಲಕ ಹರೀಶ್, ಬಾಡಿಗೆ ಹಣವನ್ನು ಕೇಳಿದಾಗ ಆರೋಪಿ ದಿನೇಶ್, ಆಟೊ ಚಾಲಕನ ಮೇಲೆ ಖಾರದ ಪುಡಿ ಎರಚಿ ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಇರಿದು ಗಾಯಗೊಳಿಸಿದ್ದ ಎಂದು ತಿಳಿದು ಬಂದಿದೆ. ಆಟೊ ಚಾಲಕ ಹರೀಶ್ ಅಲ್ಲಿಂದ ತಪ್ಪಿಸಿಕೊಂಡು ಬಂದು ಜಯಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಪಟ್ಟಣದ ಠಾಣಾಧಿಕಾರಿ ಎಎಸ್ಸೈ ಸೂರಪ್ಪ ನೇತೃತ್ವದ ತಂಡ ಪ್ರಕರಣದ ದಾಖಲಿಸಿಕೊಂಡು ಹಲ್ಲೆ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿ ದಿನೇಶ್‍ನನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ. ಘಟನೆ ಬಳಿಕ ಆರೋಪಿ ದಿನೇಶ್ ಕಾಡಿನ ಕಲ್ಲು ಬಂಡೆಯ ನಡುವೆ ಅವಿತು ಕುಳಿತಿದ್ದನೆಂದು ತಿಳಿದು ಬಂದಿದೆ. ಆರೋಪಿ ದಿನೇಶ್ ನನ್ನು ಬಂಧಿಸಿರುವ ಪೊಲೀಸರು ಐಪಿಸಿ 307, 504ರಂತೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.