ಲೋಕಸಭಾ ಚುನಾವಣೆ ಸೀಟು ಹಂಚಿಕೆ: ಕಾಂಗ್ರೆಸ್-ಜೆಡಿಎಸ್ ಪ್ರಮುಖರ ಸಭೆ

Update: 2019-02-25 14:14 GMT

ಬೆಂಗಳೂರು, ಫೆ.25: ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಆಡಳಿತರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವಿನ ಸೀಟು ಹಂಚಿಕೆ ಕುರಿತು ಉಭಯ ಪಕ್ಷಗಳ ಪ್ರಮುಖ ನಾಯಕರ ನಡುವೆ ಮೊದಲ ಸುತ್ತಿನ ಮಾತುಕತೆ ನಡೆದಿದೆ.

ಸೋಮವಾರ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಪಾಲ್ಗೊಂಡಿದ್ದರು.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಸದರಿದ್ದು, ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಸಂಸದರಿದ್ದಾರೆ. ಕಾಂಗ್ರೆಸ್ ಪಕ್ಷದ ಹಾಲಿ ಸಂಸದರ ಕ್ಷೇತ್ರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಉಳಿದ 16 ಕ್ಷೇತ್ರಗಳ ಸೀಟು ಹಂಚಿಕೆ ಕುರಿತು ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಜೆಡಿಎಸ್‌ಗೆ ಎಂಟು ಕ್ಷೇತ್ರಗಳನ್ನು ಬಿಟ್ಟುಕೊಟ್ಟು, 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಣಕ್ಕಿಳಿಯಲು ಉತ್ಸುಕವಾಗಿದೆ. ಆದರೆ, ಜೆಡಿಎಸ್ 12 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬೇಡಿಕೆಯಿಟ್ಟಿದೆ ಎಂದು ತಿಳಿದು ಬಂದಿದೆ.

ಜೆಡಿಎಸ್ ಪಕ್ಷವು ತಾನು ಪ್ರತಿನಿಧಿಸುತ್ತಿರುವ ಹಾಸನ ಹಾಗೂ ಮಂಡ್ಯ ಸೇರಿದಂತೆ, ಶಿವಮೊಗ್ಗ, ರಾಯಚೂರು, ಉತ್ತರ ಕನ್ನಡ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್ ಮೇಲೆ ಒತ್ತಡ ಹೇರುತ್ತಿದೆ ಎನ್ನಲಾಗಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ಸಂಬಂಧ 28 ಕ್ಷೇತ್ರಗಳ ಬಗ್ಗೆಯೂ ಪ್ರಾಥಮಿಕ ಚರ್ಚೆ ಮಾಡಿದ್ದೇವೆ. ಯಾವ ಕ್ಷೇತ್ರದಲ್ಲಿ ಹೆಚ್ಚು ಗೆಲ್ಲುವ ಅವಕಾಶವಿದೆಯೋ ಅಂತಹ ಅಭ್ಯರ್ಥಿಗಳಿಗೆ ಅವಕಾಶ ಕೊಡಲಾಗುತ್ತದೆ ಎಂದರು.

ಇನ್ನೆರಡು ಮೂರು ದಿನಗಳಲ್ಲಿ ಸಮನ್ವಯ ಸಮಿತಿ ಸಭೆ ನಡೆಸಿ, ಆದಷ್ಟು ಶೀಘ್ರದಲ್ಲಿ ಸೀಟು ಹಂಚಿಕೆ ವಿಚಾರವನ್ನು ಅಂತಿಮಗೊಳಿಸಲಾಗುವುದು. ಇಂದು ತುಂಬಾ ಆಶಾದಾಯಕವಾದ ಸಭೆ ನಡೆದಿದೆ. ಕೋಮುವಾದಿ ಪಕ್ಷವನ್ನು ದೂರ ಇಡುವುದಷ್ಟೇ ನಮ್ಮ ಉದ್ದೇಶ. ಹಾಗಾಗಿ ಉಭಯ ಪಕ್ಷಗಳಲ್ಲಿ ಯಾವುದೇ ಪ್ರತಿಷ್ಠೆ ಇಲ್ಲದೇ ಹೊಂದಾಣಿಕೆ ಆಗಲಿದೆ ಎಂದು ಅವರು ಹೇಳಿದರು.

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಗೆಲ್ಲುವ ಸಾಮರ್ಥ್ಯ ಗಮನಿಸಿ, ಎರಡು ಪಕ್ಷಗಳು ಒಟ್ಟಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಕನಿಷ್ಠ 25 ಕ್ಷೇತ್ರಗಳನ್ನಾದರೂ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. ಸೀಟು ಹಂಚಿಕೆ ವಿಚಾರದಲ್ಲಿ ಪಕ್ಷಗಳ ಪ್ರಭಾವಕ್ಕಿಂತ ಅಭ್ಯರ್ಥಿಯ ಗೆಲುವು ಮುಖ್ಯವಾಗಲಿದೆ. ಇಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಎಂಬ ಭೇದ ಭಾವವಿಲ್ಲ ಎಂದರು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಯಾರಿಗೆ ಎಷ್ಟು ಸೀಟುಗಳು, ಎಷ್ಟು ಸ್ಥಾನಗಳು ಎನ್ನುವುದು ಮುಖ್ಯವಲ್ಲ, ಬಿಜೆಪಿಗೆ ಕಡಿಮೆ ಸೀಟು ಬರುವಂತೆ ಮಾಡಿ, ನಾವು ಹೆಚ್ಚು ಸ್ಥಾನ ಗೆಲ್ಲುವುದೇ ನಮ್ಮ ಮುಂದಿರುವ ಪ್ರಮುಖ ಗುರಿ. ಮೈತ್ರಿ ಪಕ್ಷಗಳು ಕನಿಷ್ಠ 25 ಸ್ಥಾನ ಗೆಲ್ಲಲೇಬೇಕೆಂಬ ರಣ ನೀತಿ ರೂಪಿಸುವ ತೀರ್ಮಾನ ಕೈಗೊಂಡಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News