×
Ad

ಅವಿಭಜಿತ ಕೋಲಾರ ಜಿಲ್ಲೆಯನ್ನು ಮಲೆನಾಡನ್ನಾಗಿಸಲು ಪಣ: ಸ್ಪೀಕರ್ ರಮೇಶ್‍ ಕುಮಾರ್

Update: 2019-02-25 20:13 IST

ಕೋಲಾರ,ಫೆ.25: ಮುಂದಿನ ತಲೆಮಾರಿನ ಉಳಿವಿಗೆ ಅವಿಭಜಿತ ಕೋಲಾರ ಜಿಲ್ಲೆಯನ್ನು ಮಲೆನಾಡನ್ನಾಗಿಸಲು ಪಣತೊಡಲಾಗಿದ್ದು, 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ 2021ರ ಜ.1ಕ್ಕೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ ಕುಮಾರ್ ತಿಳಿಸಿದರು.

ನಗರ ಹೊರವಲಯದ ನಂದಿನಿ ಪ್ಯಾಲೇಸ್‍ನಲ್ಲಿ ಸೋಮವಾರ ನಡೆದ ಎತ್ತಿನಹೊಳೆ ಯೋಜನೆ ಪ್ರಗತಿಯ ಪ್ರಾತ್ಯಕ್ಷಿಕೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೆಸಿ ವ್ಯಾಲಿ ಯೋಜನೆಯನ್ನು 2 ವರ್ಷದಲ್ಲಿ ಮುಗಿಸುವುದಾಗಿ ಹೇಳಲಾಗಿತ್ತು. ಆದರೆ ನಾನು ಹಗಲು ರಾತ್ರಿ ಅಧಿಕಾರಿಗಳ ಬೆನ್ನಿಗೆ ಬಿದ್ದು, ಎಲ್ಲ ಸಮಸ್ಯೆ ಬಗೆಹರಿಸಿ 1 ವರ್ಷದಲ್ಲೇ ಮುಗಿಸಿ ತೋರಿಸಿರುವಂತೆಯೇ, 4 ವರ್ಷದಲ್ಲಿ ಮುಗಿಯಲಿದೆ ಎಂದು ಹೇಳಿರುವ ಎತ್ತಿನಹೊಳೆಯನ್ನು 2 ವರ್ಷದಲ್ಲಿ ಮುಗಿಸುತ್ತೇವೆ. 2020ರ ಡಿಸೆಂಬರ್ ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳುವುದು, 2021ರ ಜ.1ರಂದು ನೀರು ಹರಿಯಲಿದೆ. ಅದಕ್ಕಾಗಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರ ಸಹಕಾರವೂ ಅಗತ್ಯ ಎಂದು ತಿಳಿಸಿದರು.

ಯೋಜನೆಯಿಂದ ಸಮಸ್ಯೆಯೇನೂ ಇಲ್ಲ: ಯೋಜನೆಯಡಿ ಒಟ್ಟು 24.01 ಟಿಎಂಸಿ ನೀರು ಲಭ್ಯವಾಗುತ್ತಿದ್ದು, ಅದರಲ್ಲಿ ಶೇ.6ರಷ್ಟು ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಯಲಿದೆ. ಮಳೆಗಾಲದಲ್ಲಿ 450-500 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿಯುತ್ತಿದ್ದು, ಅದರಲ್ಲಿ 24 ಟಿಎಂಸಿ ನೀರನ್ನು ಮಾತ್ರವೇ ಪಡೆಯುತ್ತಿದ್ದು, ಯೋಜನೆಯಿಂದಾಗಿ ಪರಿಸರ ಅಸಮತೋಲನವಾಗಲಿ, ಜೀವ ಜಂತುಗಳಿಗೆ ಯಾವುದೇ ಅಪಾಯವಿಲ್ಲ. ಅವಿಭಜಿತ ಜಿಲ್ಲೆಯ 527 ಕೆರೆಗಳಿಗೆ ಪಶ್ಚಿಮಾಭಿಮುಖವಾಗಿ ನೀರು ಹರಿಯಲಿದ್ದು, ಸಾಮಾನ್ಯ ಭೂಸ್ವಾಧೀನಕ್ಕೆ ವರ್ಷಾನುಗಟ್ಟಲೆ ಸಮಯ ಬೇಕಾಗುತ್ತದೆ. ಆದರೆ, ಅದರಿಂದ ವಿನಾಯಿತಿ ಪಡೆದಿರುವುದರಿಂದ ಪ್ರಕ್ರಿಯೆ ಶೀಘ್ರವಾಗಿ ನಡೆಯಲಿದೆ. ಯಾರೂ ಅದಕ್ಕೆ ಅಡೆತಡೆ ಉಂಟು ಮಾಡುವ ಪ್ರಶ್ನೆಯೇ ಇಲ್ಲ. ಇನ್ನೇನಿದ್ದರೂ ಕಾಮಗಾರಿಯು ಮತ್ತಷ್ಟು ವೇಗವಾಗಿ ನಡೆಯಬೇಕಿದೆಯಷ್ಟೇ ಎಂದರು.

ಮುಖ್ಯಮಂತ್ರಿಗಳು ಮನಸ್ಸು ಬದಲಿಸಿದ್ದಾರೆ: 29 ತಾಲೂಕುಗಳ 38 ಪಟ್ಟಣಗಳು ಸೇರಿದಂತೆ 6,657 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ 13000 ಕೋಟಿ ರೂ.ಗಳನ್ನು ಮೀಸಲಿಟ್ಟು, ಚಾಲನೆ ನೀಡಿದ್ದರು. ಕಾರಣಾಂತರಗಳಿಂದ ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಮನಸ್ಸು ಬದಲಾಯಿಸಿ ಯೋಜನೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರದ 527 ಕೆರೆಗಳಿಗೆ ನೀರು ಹರಿಯಲಿರುವ ಹಿನ್ನೆಲೆಯಲ್ಲಿ ಕೆರೆಗಳ ಜೀರ್ಣೋದ್ಧಾರವೂ ಅಗತ್ಯವಿದೆ. ಈಗಾಗಲೇ ರಾಜ್ಯ ಸರಕಾರವು ಬಜೆಟ್‍ನಲ್ಲಿ ಯೋಜನೆಗೆ ಅನುದಾನ ನೀಡಿದೆಯಾದರೂ ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ನಾವೂ ಸಹ ಸ್ವಚ್ಛತೆಗೆ ಮುಂದಾಗಬೇಕಿದ್ದು, ಯಾರು ಎಷ್ಟೇ ಪ್ರಬಲರಾಗಿದ್ದರೂ ಮುಲಾಜಿಲ್ಲದೆ ಒತ್ತುವರಿ ತೆರವು ಕಾರ್ಯ ನಡೆಯುತ್ತದೆ. ಕೆರೆಗಳು ಸ್ವಚ್ಛವಾದ ಕೂಡಲೇ ಅಲ್ಲಿ ಫಲಕವನ್ನು ಅಳವಡಿಸಲಾಗುತ್ತದೆ, ಅದರಿಂದ ಜನರಿಗೆ ನಂಬಿಕೆ ಬರುತ್ತದೆ ಎಂದರು.

ಗ್ರಾಮ ಪಂಚಾಯತ್ ಗಳಿಂದ ಎಲ್ಲ ಸ್ಥಳೀಯ ಸಂಸ್ಥೆಗಳು, ಸಂಘಟನೆಗಳು ಸ್ವಯಂಪ್ರೇರಿತರಾಗಿ ಎತ್ತಿನಹೊಳೆ ಯೋಜನೆ ಕಾಮಗಾರಿ ಸ್ಥಳಕ್ಕೆ ನಿಮ್ಮ ಮಟ್ಟದಲ್ಲಿ ಹೋಗಿ ಬನ್ನಿ. ಅಲ್ಲಿನ ವಾಸ್ತವಾಂಶವನ್ನು ಅರಿತು, ನಿಮ್ಮವರಿಗೂ ತಿಳಿಸಿದರೆ ಅನುಕೂಲವಾಗುತ್ತದೆ. ನಾವು ನೂರು ವರ್ಷ ಇರುವುದಿಲ್ಲ. ಇರುವಷ್ಟು ದಿನ ಸ್ವಂತಕ್ಕೆ ಆಸ್ತಿ ಮಾಡಿದರೆ ಅದಕ್ಕೆ ನಮ್ಮ ಮಕ್ಕಳು ವಾರಸುದಾರರಾಗುತ್ತಾರೆ. ಇಂತಹ ಕೆಲಸ ಮಾಡಿದರೆ ಎಲ್ಲರೂ ವಾರಸುದಾರರಾಗುತ್ತಾರೆ. ಹೀಗಾಗಿ ನೀರು ಮತ್ತು ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು. 

ಎತ್ತಿನಹೊಳೆ ಯೋಜನೆಯ ಕುರಿತು ಪ್ರಾತ್ಯಕ್ಷಿಕೆಯಡಿ ಸುದೀರ್ಘ ಮಾಹಿತಿ ನೀಡಿದ ಯೋಜನೆಯ ಮುಖ್ಯ ಎಂಜಿನಿಯರ್ ಮಾಧವ್, ಕಾಮಗಾರಿಗೆ ಯಾವುದೇ ಅಡೆತಡೆ ಇಲ್ಲದೆ ಸಂಪೂರ್ಣ ಸಹಕಾರ ಸಿಕ್ಕಿದ್ದೇ ಆದಲ್ಲಿ 24 ಗಂಟೆಯೂ ಕೆಲಸ ಮಾಡಿ ಒಂದೂವರೆ ವರ್ಷದಲ್ಲೇ ಕಾಮಗಾರಿ ಮುಗಿಸುವುದಾಗಿ ತಿಳಿಸಿದರು.

ಯೋಜನೆ ಸ್ಥಳದಿಂದ ಬೈರಗೊಂಡ್ಲಿವರೆಗೆ 260 ಕಿಮೀ ನಾಲೆ ಮೂಲಕ ನೀರು ಹರಿಸಬೇಕಿದೆ. ಅಲ್ಲಲ್ಲಿ ಮೆಟ್ರೋ ಮಾದರಿಯಲ್ಲಿ ಪಿಲ್ಲರ್ ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮಣ್ಣು ಸ್ಟ್ರಾಂಗ್ ಇಲ್ಲದಿರುವ ಕಾರಣ ವಿಳಂಬವಾಗುತ್ತಿದೆ ಎಂದರು.

ಸಕಲೇಶಪುರದ ಬಳಿ 6 ತಿಂಗಳು ಕೆಲಸ ನಡೆಸಬೇಕಿದ್ದು, ಮಳೆ ಆರಂಭವಾದರೆ ಅಲ್ಲಿ ಸುಮಾರು 4,000 ಮಿಮೀ ಸುರಿಯುತ್ತದೆ. ಕೆಲಸ ಮಾಡಲು ಅಸಾಧ್ಯ. ಹೀಗಾಗಿ ಮಳೆಗಾಲದ ಮುಂಚೆಯೇ ಮುಗಿಸಿಕೊಳ್ಳಬೇಕು ಎಂದು ಹೇಳಿದ ಅವರು, 2,000 ಎಚ್‍ಪಿಗಿಂತಲೂ ಹೆಚ್ಚಿನ ಸಾಮರ್ಥ್ಯದ ಪಂಪು, ಮೋಟರುಗಳನ್ನು ಅಳವಡಿಸುತ್ತಿರುವುದಾಗಿ ವಿವರಿಸಿದರು.

ಅವಿಭಜಿತ ಜಿಲ್ಲೆಗೆ 10 ಟಿಎಂಸಿ ನೀರು ಕೆರೆಗಳನ್ನು ತುಂಬಿಸಲು ಲಭ್ಯವಾಗಲಿದೆ. ಕೆರೆಗಳ ಅಭಿವೃದ್ಧಿಗೆ 73 ಕೋಟಿ ರೂ.ಗಳನ್ನೂ ಈಗಾಗಲೇ ಸರಕಾರ ನೀಡಿದೆ. ಈಗಾಗಲೇ 4,000 ಕೋಟಿರೂಗಳಷ್ಟು ಹಣ ವೆಚ್ಚವಾಗಿದ್ದು, ಹಣದ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಕೆ.ಶ್ರೀನಿವಾಸಗೌಡ, ಕೆ.ವೈ.ನಂಜೇಗೌಡ, ರೂಪಾಶಶಿಧರ್, ಎಂಎಲ್‍ಸಿ ನಸೀರ್ ಅಹಮದ್, ಜಿಪಂ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ, ಉಪಾಧ್ಯಕ್ಷೆ ಯಶೋಧಮ್ಮ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News