ಬಿಸಿಲಿನ ಝಳಕ್ಕೆ ತತ್ತರಿಸುತ್ತಿರುವ ರಾಜ್ಯದ ಜನತೆ
ಬೆಂಗಳೂರು, ಫೆ.25: ಬೇಸಿಗೆ ಕಾಲ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿ ರಾಜ್ಯಾದ್ಯಂತ ಅತ್ಯಧಿಕ ಪ್ರಮಾಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದ್ದು, ಉತ್ತರ ಒಳನಾಡಿನ ಜಿಲ್ಲೆಗಳು ಸೇರಿದಂತೆ ಇಡೀ ರಾಜ್ಯವೇ ಬಿಸಿಲಿನ ಝಳದಿಂದ ತತ್ತರಿಸಿ ಹೋಗುತ್ತಿದೆ.
ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ವಾಡಿಕೆಗಿಂತಲೂ ಅಧಿಕವಾದ ತಾಪಮಾನ ದಾಖಲಾಗುತ್ತಿದೆ. ಉತ್ತರ ಒಳನಾಡಿನ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ 2-4 ರಷ್ಟು ಅಧಿಕ ಸೆಲ್ಸಿಯನ್ಸ್ ಡಿಗ್ರಿಯಷ್ಟು ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ದಕ್ಷಿಣ ಒಳನಾಡಿನಲ್ಲಿ 2-3, ಕರಾವಳಿಯಲ್ಲಿ 4-5ರಷ್ಟು ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗಿದೆ. ಉತ್ತರ ಒಳನಾಡು ಹಾಗೂ ಕರಾವಳಿಗಿಂತ ದಕ್ಷಿಣ ಒಳನಾಡಿನಲ್ಲಿ ಬಿಸಿಲಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಿದೆ.
ಬೇಸಿಗೆ ಆರಂಭದ ಸಮಯದಲ್ಲಿ ವಾತಾವರಣದಲ್ಲಿ ಬದಲಾವಣೆಯಾಗುವುದು ಸಹಜ ಎಂದು ಹವಾಮಾನ ಇಲಾಖೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೂ, ಬಿಸಿಲಿನ ಝಳದಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ. ರಾಜ್ಯದಲ್ಲಿ ಒಣ ಹವೆಯಿದ್ದು, ಎಲ್ಲೂ ಮಳೆ ಬರುವ ಮುನ್ಸೂಚನೆಯಿಲ್ಲ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಜ್ಞರು ತಿಳಿಸಿದ್ದಾರೆ.
ಬಿಸಿಲಿಗೆ ತತ್ತರಿಸಿದ ಜಾನುವಾರುಗಳು: ಬಿಸಿಲಿಗ ಧಗೆ ಹೆಚ್ಚಾಗುತ್ತಿದ್ದು ಜನರಷ್ಟೇ ಅಲ್ಲದೆ ಜಾನುವಾರುಗಳೂ ತತ್ತರಿಸಿ ಹೋಗುತ್ತಿವೆ. ಮಾರ್ಚ್‌ನಿಂದ ಆರಂಭವಾಗಬೇಕಿದ್ದ ಬಿಸಿಲು ಫೆಬ್ರವರಿಯಿಂದಲೇ ಆರಂಭವಾಗಿದೆ. ಇದರಿಂದಾಗಿ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಪ್ರಯಾಸ ಪಡುವಂತಾಗಿದೆ. ಇನ್ನು ಬಿಸಿಲಿನ ತಾಪ ತಾಳಲಾರದೆ ಎಮ್ಮೆ, ಕುರಿ, ಕೋಳಿ, ದನ-ಕರುಗಳು ತೀವ್ರ ತೊಂದರೆ ಅನುಭವಿಸುತ್ತಿವೆ.
ಸಂಜೀವಿನಿಯಾದ ಎಳನೀರು: ರಾಜ್ಯಾದ್ಯಂತ ಬಿಸಿಲಿನ ಪ್ರಮಾಣ ಅಧಿಕವಾಗಿರುವುದರಿಂದ ಎಲ್ಲರೂ ಎಳನೀರಿಗೆ ಮುಗಿಬೀಳುತ್ತಿದ್ದಾರೆ. ಹಲವು ಕಡೆಗಳಲ್ಲಿ ಎಳನೀರೂ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಬಯಲುಸೀಮೆ ಜಿಲ್ಲೆಗಳಲ್ಲಿ ನೀರಿಲ್ಲದೆ ಎಳನೀರು ಮರಗಳು ಒಣಗಿ ಹೋಗಿವೆ. ಇದರಿಂದ ಬೇರೆ ಜಿಲ್ಲೆಗಳಿಂದ ತಂದು ಮಾರಾಟ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ 20 ರಿಂದ 40 ರೂ.ವರೆಗೂ ಒಂದು ಎಳನೀರು ಮಾರಾಟವಾಗುತ್ತಿದೆ.
ಪ್ರವಾಸಿಗರ ಕುಸಿತ: ರಾಜ್ಯಾದ್ಯಂತ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರುವವರ ಸಂಖ್ಯೆ ಕುಸಿತಗೊಂಡಿದೆ. ಬಿಸಿಲಿನ ಪ್ರಮಾಣ ಅತ್ಯಧಿಕವಾಗಿರುವುದರಿಂದ ಎಲ್ಲರೂ ತಂಪಾದ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಪ್ರವಾಸಿ ತಾಣಗಳು ಬಣಗುಡುತ್ತಿವೆ. ಮಾರ್ಚ್‌ನಿಂದ ಇನ್ನೂ ಅಧಿಕವಾಗಿ ಬಿಸಿಲು ಹೆಚ್ಚಳವಾಗುವುದರಿಂದ ಇನ್ನು ಮೂರು ತಿಂಗಳು ಪ್ರವಾಸಿಗರ ಸಂಖ್ಯೆ ಇಳಿಮುಖವಾಗುವ ಸಾಧ್ಯತೆಯಿದೆ.
ಎಲ್ಲೆಲ್ಲಿ ಎಷ್ಟಿದೆ:(ಅಂದಾಜು)
ಕಲಬುರ್ಗಿ: 38.6
ಕೊಪ್ಪಳ: 38.0
ಕಾರವಾರ: 37.8
ಮಂಗಳೂರು: 37.4
ವಿಜಯಪುರ: 37.1
ಬಾಗಲಕೋಟೆ: 37.0
ರಾಯಚೂರು: 36.5
ಬೆಂಗಳೂರು: 35.0
ಕೋಲಾರ: 34.0
ಚಿಕ್ಕಬಳ್ಳಾಪುರ: 33.5