ಏರುತ್ತಲೇ ಇರುವ ತರಕಾರಿಗಳ ದರ: ಜನಸಾಮಾನ್ಯರಿಗೆ ಪೆಟ್ಟು

Update: 2019-02-25 16:24 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.25: ಅಧಿಕ ತಾಪಮಾನದ ಹಿನ್ನೆಲೆಯಲ್ಲಿ ಕಳೆದೊಂದು ವಾರದಲ್ಲಿ ದಿನನಿತ್ಯ ಬಳಕೆಯ ತರಕಾರಿ ದರವು ವ್ಯಾಪಕವಾಗಿ ಏರುತ್ತಲೇ ಹೋಗಿದ್ದು, ಗ್ರಾಹಕರಿಗೆ ಭಾರಿ ಪ್ರಮಾಣದ ಪೆಟ್ಟು ನೀಡಿದೆ.

ಕಳೆದ ವಾರಕ್ಕೆ ಹೋಲಿಸಿದರೆ ವಿವಿಧ ತರಕಾರಿಗಳ ಸಗಟು ದರದಲ್ಲಿ ಕೆ.ಜಿ.ಯೊಂದಕ್ಕೆ 10 ರಿಂದ 20 ರೂ.ವರೆಗೆ ಏರಿಕೆಯಾಗಿದೆ. 25 ರೂ. ಇದ್ದ ಬೀನ್ಸ್ 38 ರೂ. ಗೆ ತಲುಪಿದೆ. ಈರೇಕಾಯಿ 25 ರೂ. ಇದ್ದುದು ಇದೀಗ 40 ರೂ.ಗೆ ಏರಿಕೆಯಾಗಿದೆ. ಅದೇ ರೀತಿ ಬದನೆಕಾಯಿ 15 ರೂ. ಇದ್ದುದು 20-25 ರೂ.ವರೆಗೆ ಏರಿಕೆಯಾಗಿದೆ. ಹಸಿ ಮೆಣಸಿನಕಾಯಿ 25-30 ರೂ. ಇದ್ದುದು ಇದೀಗ 35-40 ರೂ.ಗೆ ತಲುಪಿದೆ.

ಬೇಸಿಗೆಯಲ್ಲಿ ಬಹುಬೇಡಿಕೆಯ ತರಕಾರಿಯೆಂದರೆ ಸೌತೆಕಾಯಿ. ಇದು ಈಗಾಗಲೇ ಗಗನಕ್ಕೇರಿದೆ. 60 ಕೆ.ಜಿ. ಮೂಟೆ ಬೆಲೆ ಒಂದು ಸಾವಿರ ರೂ. ತಲುಪಿದೆ. ಇದು ಮುಂದಿನ 15 ದಿನಗಳ ನಂತರ ಬಹುತೇಕ ತರಕಾರಿಗಳ ದರ ಗಗನಕ್ಕೇರುವ ಸಾಧ್ಯತೆಯಿದ್ದು, ಗ್ರಾಹಕರಿಗೆ ಭಾರೀ ತೊಂದರೆ ಉಂಟಾಗಲಿದೆ. ಮಾರ್ಚ್- ಎಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಎಂದು ಮೂಲಗಳು ಹೇಳಿವೆ.

ಈಗಾಗಲೇ ತರಕಾರಿ ಬೆಳೆಗಳಿಗೆ ನೀರಿನ ಕೊರತೆ ಎದುರಾಗಿದೆ. ಇನ್ನು ಬಿಸಿಲಿನ ಝಳದಿಂದ ಮುಂದಿನ ದಿನಗಳಲ್ಲಿ ತರಕಾರಿಗಳ ಇಳುವರಿಯಲ್ಲಿ ಮತ್ತಷ್ಟು ಕುಂಠಿತಗೊಳ್ಳಲಿದೆ. ಈಗಾಗಲೇ ರಾಜ್ಯದ ಹಲವೆಡೆ ಅಲ್ಲಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತಿವೆ. ಇದರ ಪರಿಣಾಮ ಮುಂದೆ ರೈತರಿಗೂ ತಟ್ಟದಿರದು. ಹೀಗಾಗಿ ಸರಕಾರ ಈಗಲೇ ಎಚ್ಚೆತ್ತುಕೊಂಡು ಪರಿಹಾರ ಮಾರ್ಗ ಕಂಡುಕೊಳ್ಳಬೇಕು ಎಂದು ಕಲಾಸಿಪಾಳ್ಯ ಹಣ್ಣು-ತರಕಾರಿ ಮಾರಾಟಗಾರರ ಸಂಘದ ಅಧ್ಯಕ್ಷ ಆರ್.ವಿ. ಗೋಪಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News